ಬೆಂಗಳೂರು, ಮಾ.28 (DaijiworldNews/PY): ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದೆ ಎಂದು ಹೇಳಿದ್ದ ಸಚಿವ ಮಾಧುಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಕಾಂಗ್ರೆಸ್, "ಕೇಂದ್ರ ಸರ್ಕಾರದ ಸರ್ವಾಧಿಕಾರ ಧೋರಣೆಯನ್ನು ಬಹಿರಂಗವಾಗಿ ಒಪ್ಪಿ, ಖಂಡಿಸಿದ್ದಕ್ಕೆ ಸಚಿವ ಮಾಧುಸ್ವಾಮಿಗೆ ಅವರಿಗೆ ಅಭಿನಂದನೆಗಳು" ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೇಂದ್ರ ಸರ್ಕಾರದ ಸರ್ವಾಧಿಕಾರ ಧೋರಣೆಯನ್ನು ಬಹಿರಂಗವಾಗಿ ಒಪ್ಪಿ, ಖಂಡಿಸಿದ್ದಕ್ಕೆ ಸಚಿವ ಮಾಧುಸ್ವಾಮಿಗೆ ಅವರಿಗೆ ಅಭಿನಂದನೆಗಳು!. ರಾಜ್ಯಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ರಾಜ್ಯಗಳ ವಿಷಯವಾದ ಕೃಷಿಗೆ ಸಂಬಂಧಿತ ಕಾಯ್ದೆಗಳನ್ನು ಹೇರಿ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಕೇಂದ್ರ. ಹಿಂದಿತ್ವ ಹೇರಿಕೆ ಹಾಗೂ ಜಿಎಸ್ಟಿ ತೆರಿಗೆ ಕಬಳಿಕೆಗಳು ರಾಜ್ಯಕ್ಕೆ ಮಾರಕ" ಎಂದು ಟೀಕಿಸಿದೆ.
"ಭಾರತ ಭಾಷೆ, ಸಂಸ್ಕೃತಿ, ಆಹಾರ ಹೀಗೆ ಬಹುತ್ವದ ಸಂಕೀರ್ಣತೆಗಳಿಂದ ಕೂಡಿದ ಒಕ್ಕೂಟ ವ್ಯವಸ್ಥೆ. ಇದನ್ನು ಮರೆತು ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ರಾಷ್ಟ್ರವನ್ನಾಗಿಸಲು ಹೊರಟಿದ್ದಾರೆ, ಒನ್ ನೇಷನ್ ಒನ್ ಎಲೆಕ್ಷನ್ ಅದಕ್ಕೊಂದು ತಾಜಾ ಉದಾಹರಣೆ. ಏಕ ಭಾಷೆ, ಏಕ ಸಂಸ್ಕೃತಿ ಹೇರಿ ದೇಶವನ್ನು ಮುಷ್ಠಿಯೊಳಗೆ ಇಟ್ಟುಕೊಳ್ಳುವ ಆರ್ಎಸ್ಎಸ್ನ ಹುನ್ನಾರ ನಡೆಯದು" ಎಂದಿದೆ.
ಮೈಸೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಮಾಧುಸ್ವಾಮಿ, ''ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಕೇಂದ್ರ ಸರಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ'' ಎಂದು ಹೇಳಿದ್ದರು.
''ಕೇಂದ್ರ ಸರ್ಕಾರ ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ವಿಫಲವಾಗಿದ್ದು ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕೂಗು ಅಧಿಕವಾಗುತ್ತಿದೆ'' ಎಂದು ತನ್ನದೇ ಪಕ್ಷದ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.