ವಿಜಯಪುರ, ಮಾ.28 (DaijiworldNews/HR): ದಲಿತರು ರಾಜ್ಯದ ಮುಖ್ಯಮಂತ್ರಿಯಾಗುವ ಸಮಯ ಬಂದಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಕೇವಲ ಶೇ. 2 ಮತ್ತು 3 ರಷ್ಟಿರುವ ಸಮುದಾಯದವರು ಸಿಎಂ ಆಗಿದ್ದಾರೆ. ಆದರೆ ಇಲ್ಲಿಯವರೆಗೆ ರಾಜ್ಯದಲ್ಲಿ 23% ಜನಸಂಖ್ಯೆಯನ್ನು ಹೊಂದಿರುವ ದಲಿತ ಸಮುದಾಯದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ಕನಿಷ್ಠ ಈಗ ದಲಿತರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು" ಎಂದರು.
"ದಲಿತರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು ನಾನು ಒತ್ತಾಯಿಸುತ್ತಿದ್ದೆನೆಂದರೆ ನಾನು ಈ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತೇನೆಂಬ ದುರಾಸೆಯೆಂದು ಅರ್ಥವಲ್ಲ. ಪ್ರಸ್ತುತ ನಾನು ಕೇಂದ್ರದಲ್ಲಿ ರಾಜಕೀಯದಲ್ಲಿದ್ದೇನೆ. ಪಕ್ಷದ ಇಚ್ಚೆಯಿದ್ದಲ್ಲಿ ನಾನು ರಾಜ್ಯ ರಾಜಕಾರಣಕ್ಕೆ ಮರಳಲು ಸಿದ್ಧನಿದ್ದೇನೆ. ರಾಜಕೀಯ ನನಗೆ ಹೊಸದಲ್ಲ. ನಾನು ಇಲ್ಲಿಯೂ ಸಚಿವನಾಗಿದ್ದೆ. ಇದರರ್ಥ ನಾನು ರಾಜ್ಯದಿಂದ ಕೇಂದ್ರಕ್ಕೆ ಹೋಗಿದ್ದೇನೆ. ಹಾಗಾಗಿ ನಾನು ರಾಜ್ಯ ರಾಜಕಾರಣಕ್ಕೆ ಮರಳಿದರೂ ಸಹ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸಬಹುದು" ಎಂದಿದ್ದಾರೆ.
"ರಾಜ್ಯದಲ್ಲಿ ವಿದ್ಯುತ್ ವಿತರಣೆ ಬಗ್ಗೆ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ರಾಜ್ಯದಲ್ಲಿ 30,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅದರಲ್ಲಿ 50% ಸಹ ಬಳಸುತ್ತಿಲ್ಲ. ವಿದ್ಯುತ್ ಕೊರತೆಯಿಂದಾಗಿ ರೈತರು ಇನ್ನೂ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದು ಇಂಧನ ಖಾತೆಯನ್ನು ನಿರ್ವಹಿಸುತ್ತಿರುವ ಸಚಿವರ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ."
ಇನ್ನು "ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಕೊರತೆಯಿಲ್ಲ. ಒಟ್ಟಾರೆಯಾಗಿ 30,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ, ಅದರಲ್ಲಿ ಎನ್ಟಿಪಿಸಿ, ಆರ್ಟಿಪಿಎಸ್, ಬಿಟಿಪಿಎಸ್ ಮತ್ತು ವೈಟಿಪಿಎಸ್ ಜಂಟಿಯಾಗಿ 5,800 ಮೆಗಾವ್ಯಾಟ್ ಉಷ್ಣ ವಿದ್ಯುತ್ ಉತ್ಪಾದಿಸುತ್ತಿವೆ, 3,500 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯನ್ನು ವಿವಿಧ ಜಲಾಶಯಗಳಿಂದ ಉತ್ಪಾದಿಸಲಾಗುತ್ತಿದೆ , 2,000 ಮೆಗಾವ್ಯಾಟ್ ಪರಮಾಣು ಶಕ್ತಿ, 4,500 ಮೆಗಾವ್ಯಾಟ್ ಪವನ ಶಕ್ತಿ ಮತ್ತು 6,500 ಮೆಗಾವ್ಯಾಟ್ ಸೌರ ವಿದ್ಯುತ್ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಿ"ಎಂದು ಹೇಳಿದ್ದಾರೆ.
"ಸಿಂದಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರೆಂಬುದನ್ನು ಪಕ್ಷದ ಹಿರಿಯರು ನಿರ್ಧರಿಸುತ್ತಾರೆ. ಪಕ್ಷ ಗುರುತಿಸಿದ ಅಭ್ಯರ್ಥಿಯನ್ನು ಮುಂದೆ ಹಾಕಿಕೊಂಡು ಪ್ರಚಾರ ನಡೆಸಿ, ಗೆಲ್ಲಿಸುವುದಷ್ಟೇ ನನ್ನ ಕೆಲಸ. ನಾನೊಬ್ಬ ಪಕ್ಷದ ಕಾರ್ಯಕರ್ತನಷ್ಟೇ. ಆದರೆ ಅಭ್ಯರ್ಥಿ ಅಂತಿಮಗೊಳಿಸುವಷ್ಟು ದೊಡ್ಡ ಮನುಷ್ಯ ನಾನಲ್ಲ" ಎಂದಿದ್ದಾರೆ.