ಮೈಸೂರು, ಮಾ.28 (DaijiworldNews/MB) : ತನ್ನದೇ ಪಕ್ಷದ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾಧುಸ್ವಾಮಿ ಮಾತನಾಡಿದರು. ''ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಕೇಂದ್ರ ಸರಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ'' ಎಂದು ಹೇಳಿದರು.
''ಕೇಂದ್ರ ಸರ್ಕಾರ ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ವಿಫಲವಾಗಿದ್ದು ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕೂಗು ಅಧಿಕವಾಗುತ್ತಿದೆ'' ಎಂದು ತನ್ನದೇ ಪಕ್ಷದ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
''ಪ್ರಾದೇಶಿಕ ಅಸಮಾನತೆಯಿಂದಾಗಿ ತೆಲಂಗಾಣ, ಜಾರ್ಖಂಡ್ ರಾಜ್ಯಗಳು ಸೃಷ್ಟಿಯಾಗಿ, ರಾಜ್ಯಗಳ ಸಂಖ್ಯೆ 16ರಿಂದ 29ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಅವರ ಪಕ್ಷಕ್ಕೆ ಜನರು ವೋಟ್ ಹಾಕುತ್ತಿರುವುದು ಇದೇ ಕಾರಣಕ್ಕೆ'' ಎಂದು ಅಭಿಪ್ರಾಯಿಸಿದರು.
ಆದರೆ ಇದೇ ವಿಚಾರ ಸಂಕಿರಣದಲ್ಲಿ ಮಾತನಾಡಿದ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು, ''ಪ್ರಾದೇಶಿಕ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ'' ಎಂದೇ ಪ್ರತಿಪಾದಿಸಿದರು.