ಬೆಂಗಳೂರು, ಮಾ.28 (DaijiworldNews/PY): ಸಿಗರೇಟ್ ವಿಚಾರಕ್ಕಾಗಿ ಗಲಾಟೆಯಾಗಿ ರೌಡಿಯನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಯ ಸಂಬಂಧ ಚಂದ್ರಾಲೇಔಟ್ನಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಹತ್ಯೆಯಾದ ರೌಡಿಯನ್ನು ಸೈಯದ್ ವಸೀಂ ಅಲಿಯಾಸ್ ಬೋಡ್ಕಾನ ಎಂದು ಗುರುತಿಸಲಾಗಿದೆ.
ವಸೀಂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಜೈಲಿಗೂ ಹೋಗಿ ಬಂದಿದ್ದ. ಮಾರ್ಚ್26ರ ಶುಕ್ರವಾರ ಆತನ ಹತ್ಯೆಯಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಂಗೊಂಡಹಳ್ಳಿ ನಿವಾಸಿಗಳಾದ ಅರ್ಬಾಜ್ ಖಾನ್ ಹಾಗೂ ಸೈಫುಲ್ಲಾ ಮಧ್ಯೆ ಸಿಗರೇಟ್ ವಿಚಾರವಾಗಿ ಗಲಾಟೆಯಾಗಿತ್ತು. ಈ ಬಗ್ಗೆ ಅರ್ಬಾಜ್ಖಾನ್ ತನ್ನ ಸ್ನೇಹಿತ ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್ ಮುಖೇನ ವಸೀಂಗೆ ಮಾಹಿತಿ ನೀಡಿದ್ದು, ಸೈಫುಲ್ಲಾ ಜೊತೆ ಮಾತನಾಡಿ ಆತನಿಗೆ ಬುದ್ದಿ ಕಲಿಸುವಂತೆ ತಿಳಿಸಿದ್ದ.
"ಡಿಂಗ್ ಡಿಂಗ್ ಸೈಫುಲ್ಲಾ ಅಣ್ಣ ಶೇಕ್ ಬರ್ಕತ್ಗೆ ಕರೆ ಮಾಡಿದ್ದು, ಜಗಳದ ವಿಚಾರವಾಗಿ ಮಾತನಾಡಬೇಕು ಎಂದು ಹೇಳಿ ಮದೀನಾ ಮಸೀದಿ ಬಳಿ ಕರೆಸಿಕೊಂಡಿದ್ದ. ಎಲ್ಲರೂ ರಾತ್ರಿ ಹೊತ್ತು ಮಸೀದಿಯ ಬಳಿ ಸೇರಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ವಸೀಂನ ಮೇಲೆ ಶೇಕ್ ಬರ್ಕತ್ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
"ಹತ್ಯೆಯ ವೇಳೆ ಶೇಕ್ ಬರ್ಕತ್ನೊಂದಿಗೆ ಸೈಫುಲ್ಲಾ, ನ್ಯಾಮತ್, ಮೊಹಮ್ಮದ್ ಅಹ್ಮದ್, ಜೀಯಾವುಲ್ಲಾ ಹಾಗೂ ಮತ್ತಿತರರು ಇದ್ದರು ಎನ್ನುವ ಮಾಹಿತಿ ಇದೆ. ಇವರೆಲ್ಲರೂ ಕೂಡಾ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ" ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.