ಬೆಂಗಳೂರು, ಮಾ.28 (DaijiworldNews/HR): "ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಮಾರ್ಚ್ ನಿಂದ ಪ್ರತಿದಿನ ಸುಮಾರು 2800ರಷ್ಟು ಪ್ರಕರಣಗಳು ಕಂಡುಬರುತ್ತಿದ್ದು, ಮಾಸ್ಕ್ ಧರಿಸದೆ, ಜನಸಂದಣಿ ನಿಯಂತ್ರಿಸದಿದ್ದರೆ ಕೊರೊನಾದ ಎರಡನೇ ಅಲೆ ತಡೆಗಟ್ಟುವುದು ಅಸಾಧ್ಯ" ಎಂದು ವೈರಾಲಜಿಸ್ಟ್ ಮತ್ತು ಸಾರ್ಸ್ - ಕೋವ್-2 ಜಿನೊಮಿಕ್ ದೃಢೀಕರಣದ ನೋಡಲ್ ಅಧಿಕಾರಿ ಡಾ. ವಿ. ರವಿ ಹೇಳಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಜೂನ್ 1 ರಂದು ಅನ್ಲಾಕ್ ಹಂತ 1 ಪ್ರಾರಂಭವಾದ ಬಳಿಕ ಜನರು ಹೊರಬರಲು ಪ್ರಾರಂಭಿಸಿದ್ದು, ಈಗ ಜನರ ಮುಕ್ತ ಓಡಾಟವಿದ್ದು, ಮೇ ನಲ್ಲಿ ಇನ್ನು ಹೆಚ್ಚಾಗುವು ಸಾಧ್ಯತೆಯಿದ್ದು, ಎರಡನೇ ಅಲೆ ಮೊದಲನೆಯದಕ್ಕಿಂತ ಕೆಟ್ಟದಾಗಿರುತ್ತದೆ" ಎಂದರು.
"ಮಾಸ್ಕ್ ಧರಿಸದೆ, ಜನಸಂದಣಿಯನ್ನು ನಿಯಂತ್ರಿಸದಿದ್ದರೆ ಕೊರೊನಾದ ಎರಡನೇ ಅಲೆ ತಡೆಗಟ್ಟುತ್ತೇವೆ ಎಂಬುದು ದಡ್ಡತನದ ಆಲೋಚನೆಯಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಹೆಚ್ಚಳವಾಗಲಿದ್ದು ಜೊತೆಗೆ ಮರಣ ದರದಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಾಗಬಹುದು" ಎಂದಿದ್ದಾರೆ.
ಇನ್ನು ಮೂರನೇ ಅಲೆಯು ಇರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಖಂಡಿತವಾಗಿಯೂ ಇರಬಹುದು. ನಾವು ಅವರೊಂದಿಗೆ ಬದುಕಲು ಕಲಿಯಬೇಕು. ನಾವು ಮೂರು,ನಾಲ್ಕು, ಐದು ಮತ್ತು ಇನ್ನೂ ಅನೇಕ ಅಲೆಗಳನ್ನು ನೋಡಬಹುದು" ಎಂದು ಹೇಳಿದ್ದಾರೆ.