ಬೆಂಗಳೂರು, ಮಾ.28 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಿಡಿಯಲ್ಲಿರುವ ಯುವತಿಯ ಪೋಷಕರು ತನ್ನ ಮೇಲೆ ಮಾಡಿದ ಆರೋಪಗಳನ್ನು ಅಲ್ಲಗಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ''ರಮೇಶ್ ಜಾರಕಿಹೊಳಿ ಅವರು ಹತಾಶೆಯಲ್ಲಿದ್ದು ಅವರಿಗೆ ಏನೋ ಸಮಸ್ಯೆ ಇರಬೇಕು'' ಎಂದು ವ್ಯಂಗ್ಯವಾಡಿದ್ದಾರೆ.
ರಮೇಶ್ ಜಾರಕಿಹೊಳಿ ಹಾಗೂ ಯುವತಿಯ ಪೋಷಕರು ಡಿಕೆಶಿ ಯುವತಿಯನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ''ನಾನು ರಮೇಶ್ ಜಾರಕಿಹೊಳಿ ಮಾತನಾಡಿದ್ದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಕಾನೂನು ಇದೆ. ಅಧಿಕಾರಿಗಳು ಇದ್ದಾರೆ. ತನಿಖೆಯೂ ನಡೆಯುತ್ತಿದೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ'' ಎಂದು ಹೇಳಿದ್ದಾರೆ.
ಇನ್ನು ಪೋಷಕರು ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ''ನನಗೆ ಅದರ ಯಾವುದೇ ಅವಶ್ಯಕತೆ ಇಲ್ಲ. ಅಷ್ಟಕ್ಕೂ ನಾನು ಯುವತಿಯನ್ನು ಭೇಟಿಯೇ ಮಾಡಿಲ್ಲ. ಈ ಬಗ್ಗೆ ನಾನು ಈಗಾಗಲೇ ಹೇಳಿಕೆ ನೀಡಿದ್ದೇನೆ'' ಎಂದು ಹೇಳಿದರು.
ಇನ್ನು ತನ್ನ ಪೋಷಕರು ಹಾಗೂ ರಮೇಶ್ ಜಾರಕಿಹೊಳಿ ಪತ್ರಿಕಾ ಹೇಳಿಕೆ ನೀಡಿದ ಬಳಿಕ ಸಿಡಿ ಯುವತಿ ತನ್ನ ಐದನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ''ನಮ್ಮ ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ. ನನಗೆ ಎಲ್ಲೋ ಒಂದು ಕಡೆ ಭಯ ಆಗ್ತಾ ಇದೆ. ಅಪ್ಪ, ಅಮ್ಮನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನನ್ನ ಅಪ್ಪ, ಅಮ್ಮನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ'' ಎಂದು ಆರೋಪಿಸಿದ್ದಾಳೆ.