ಬೆಳಗಾವಿ, ಮಾ.28 (DaijiworldNews/HR): ಮಾಜಿ ಶಾಸಕ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿಯ ಪೋಷಕರನ್ನು ಎಸ್ಐಟಿ ತಂಡದವರು ಬೆಂಗಳೂರಿನಿಂದ ಬೆಳಗಾವಿಗೆ ಕರೆ ತಂದು ಎಪಿಎಂಸಿ ಠಾಣೆಗೆ ಭಾನುವಾರ ಮುಂಜಾನೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
ಎಸ್ಐಟಿ ತಂಡದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ 16 ಎಸ್ಐಟಿ ಸಿಬ್ಬಂದಿಯ ತಂಡ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು, ಸಂತ್ರಸ್ತೆಯ ಕುಟುಂಬದವರನ್ನು ತಲುಪಿಸಿ, ನಂತರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇನ್ನು ಠಾಣೆಯ ಸಿಪಿಐ ದಿಲೀಪ್ಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದು, ನಂತರ ನಗರದಲ್ಲಿ ಕುಟುಂಬ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದರು. ಮನೆ ಬಳಿ ಎಎಸ್ಐ, ಮೂವರು ಕಾನ್ಸ್ಟೆಬಲ್ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಯುವತಿ ತಂದೆ ಮಾಧ್ಯಮದವರೊಂದಿಗೆ ಹೆಚ್ಚು ಮಾತನಾಡಲು ನಿರಾಕರಿಸಿದ್ದು, "ಈಗ ಏನನ್ನೂ ಕೇಳಬೇಡಿ. ಮತ್ತೆ ನಿಮ್ಮ ಬಳಿಗೆ ಬರುತ್ತೇನೆ. ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿದ್ದೇನೆ" ಎಂದಿದ್ದಾರೆ.