ಮೈಸೂರು, ಮಾ.27 (DaijiworldNews/PY): "ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮುಜುಗರ ಆಗಿರುವುದು ನಿಜ. ಸರ್ಕಾರ ನಡೆಸುವ ಸಂದರ್ಭ ಈ ರೀತಿಯಾದ ಘಟನೆಗಳು ಎದುರಾಗುತ್ತವೆ" ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶನಿವಾರ ನಗರದಲ್ಲಿ ಮಾತನಾಡಿದ ಅವರು, "ವ್ಯಕ್ತಿಯೋರ್ವರ ವೈಯುಕ್ತಿಕ ಬದುಕನ್ನು ಇಷ್ಟು ದೊಡ್ಡದಾಗಿ ಮಾಡಬಾರದಿತ್ತು. ಇದು ವೈಯುಕ್ತಿಕ ವಿಚಾರ ಎಂದು ಸುಮ್ಮನಾಗಬೇಕಿತ್ತು. ಬದಲಾಗಿ ತೇಜೋವಧೆ ಮಾಡಲಾಗಿದೆ" ಎಂದು ತಿಳಿಸಿದರು.
"ಓರ್ವನನ್ನು ದಿಢೀರನೇ ಬಂಧಿಸುವುದು ಅಷ್ಟು ಸುಲಭವಲ್ಲ. ಯುವತಿ ನೀಡಿದ ಹೇಳಿಕೆಯಲ್ಲೂ ಕೂಡಾ ಗೊಂದಲಗಳಿವೆ. ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ಆಕೆಯೇ ಬಂದು ದೃಢವಾಗಿ ಹೇಳಿಕೆ ನೀಡಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದರು" ಎಂದು ಹೇಳಿದರು.
"ಯುವತಿ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದು ಮಾತ್ರ. ಆದರೆ, ಆ ಬಗ್ಗೆ ಯಾವುದೇ ರೀತಿಯ ಸಾಕ್ಷ್ಯ ನೀಡಿಲ್ಲ. ಡಿಕೆಶಿ ಅವರು ಈ ರೀತಿ ಮಾಡಲಾರರು ಎನ್ನುವುದು ನನ್ನ ಭಾವನೆ" ಎಂದರು.