ಬೆಂಗಳೂರು, ಮಾ.27 (DaijiworldNews/MB) : ಸಿಡಿ ಪ್ರಕರಣವನ್ನು ಧಾರಾವಾಹಿಗೆ ಹೋಲಿಕೆ ಮಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ''ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ'' ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಎಸ್ಐಟಿ ಈ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಿದೆ. ವೈಜ್ಞಾನಿಕ ಪರಿಶೀಲನೆ ನಡೆಸಲಾಗುತ್ತದೆ. ಯಾವುದೇ ಒತ್ತಡ, ಪ್ರಭಾವ ಇಲ್ಲಿ ನಡೆಯುತ್ತಿಲ್ಲ. ಕಾನೂನು ಬದ್ದವಾಗಿ ಎಸ್ಐಟಿ ತನಿಖೆ ಮಾಡುತ್ತದೆ'' ಎಂದು ಹೇಳಿದರು.
''ಈಗ ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ. ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ ಎಂಬ ಕಾರಣಕ್ಕೆ ಈ ಪ್ರತಿಕ್ರಿಯೆ ನಾನು ನೀಡುವುದಿಲ್ಲ. ಆದರೆ ಪ್ರಕರಣದ ತನಿಖೆ ನ್ಯಾಯಬದ್ದವಾಗಿ ನಡೆಯಲಿದೆ. ಎಸ್ಐಟಿ ನಿಷ್ಠುರವಾಗಿ ತನಿಖೆ ನಡೆಸುತ್ತಿದೆ. ಯಾರ ಪರವಾಗಿಯೂ ಯಾರ ವಿರುದ್ದವಾಗಿಯೂ ತನಿಖೆ ನಡೆಯುತ್ತಿಲ್ಲ. ನಿಜವಾದ ತಪ್ಪಿತಸ್ಥರು ಯಾರೂ ಎಂಬ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ'' ಎಂದರು.