ಬೆಂಗಳೂರು, ಮಾ.27 (DaijiworldNews/PY): ಸಿನೆಮಾ ಚಿತ್ರೀಕರಣದಲ್ಲಿ ಬಳಸುವ ನಕಲಿ ನೋಟುಗಳನ್ನು ಬಳಸಿ, 1.5 ಕೋಟಿ ಮೌಲ್ಯದ 500 ಕೆ.ಜಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರಾಜ್ಯ ಡ್ರಗ್ಸ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನ ಜೋಧಪುರದ ದಯಾಲ್ರಾಮ (38), ಪೂನರಾಮ (24) ಹಾಗೂ ಬುದ್ದಾರಾಮ (23) ಎಂದು ಗುರುತಿಸಲಾಗಿದೆ. ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಾಂಜಾ ಪೆಡ್ಲರ್ಗಳನ್ನು ಬಂಧಿಸುವ ಸಲುವಾಗಿ ಸಿನೆಮಾ ಚಿತ್ರೀಕರಣದಲ್ಲಿ ಬಳಸುವ ನಕಲಿ ನೋಟುಗಳನ್ನು ಸ್ಟುಡಿಯೋದಿಂದ ಪೊಲೀಸರು ಖರೀದಿಸಿದ್ದರು.
ಆರೋಪಿಗಳು ಒಡಿಶಾದಿಂದ ನಗರಕ್ಕೆ ಟ್ರಕ್ ಮೂಲಕ ಗಾಂಜಾ ಸಾಗಿಸುತ್ತಿದ್ದು, ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು. ಆರೋಪಿಗಳು ರಾಜಸ್ಥಾನ ನೋಂದಣಿ ಸಂಖ್ಯೆಯ ಟ್ರಕ್ನಲ್ಲಿ ಗಾಂಜಾ ಇಟ್ಟುಕೊಂಡು ಹೊಸಕೋಟೆ ಮೂಲಕ ಕೆ.ಆರ್.ಪುರದ ಕಡೆಗೆ ಬರುತ್ತಿದ್ದರು. ಈ ಬಗ್ಗೆ ಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಅವರನ್ನು ಹಿಡಿಯಲು ಯೋಜನೆ ರೂಪಿಸಿದ್ದಾರೆ.
"ಆರೋಪಿಗಳು ಏಕಾಏಕಿ ವ್ಯವಹಾರ ನಡೆಸಲು ಸಿದ್ದರಿರಲಿಲ್ಲ. ಹಣ ತೋರಿಸಿದರೆ ಮಾತ್ರವೇ ಅವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯ ಎಂದು ದಂಧೆಕೋರರು ತಿಳಿಸಿದ್ದರು. ಹಾಗಾಗಿ ಪೊಲೀಸರು ನಗರದ ಸ್ಟುಡಿಯೋವೊಂದನ್ನು ಸಂಪರ್ಕಿಸಿ 1 ಕೋಟಿ. ರೂ. ಮೌಲ್ಯದ ನಕಲಿ ಹಣವನ್ನು ನೀಡುವಂತೆ ಕೇಳಿದ್ದರು. ಬಳಿಕ ದಂಧೆಕೋರರನ್ನು ಗ್ರಾಹಕರ ಸೋಗಿನಲ್ಲಿ ಹೋಗಿ ಭೇಟಿ ಮಾಡಿದ ಪೊಲೀಸರು ನಕಲಿ ಹಣ ನೀಡಿದ್ದಾರೆ. ಆದರೆ, ದಂಧೆಕೋರರಿಗೆ ಈ ವಿಚಾರ ತಿಳಿಯದೇ ಅವರು 500 ಕೆಜಿ ಗಾಂಜಾ ತರಲು ಒಪ್ಪಿದ್ದಾರೆ" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
"ಮೊದಲು ಟ್ರಕ್ನಲ್ಲಿ ಶೋಧನೆ ನಡೆಸಿದಾಗ ಗಾಂಜಾ ಪತ್ತೆಯಾಗಿರಲಿಲ್ಲ. ಹಾಗಾಗಿ ಪೊಲೀಸರಿಗೆ ಆಶ್ಚರ್ಯವಾಗಿತ್ತು. ಬಳಿಕ ಮತ್ತೊಮ್ಮೆ ಪರಿಶೀಲಿಸಿದಾಗ ಚಾಲಕನ ಆಸನದ ಹಿಂದೆ ಪ್ರತ್ಯೆಕವಾದ ಕ್ಯಾಬಿನ್ ಪತ್ತೆಯಾಗಿತ್ತು. ಗಾಂಜಾ ಸಾಗಾಟಕ್ಕಾಗಿ ಆರೋಪಿಗಳು ಪ್ರತ್ಯೇಕವಾದ ಕ್ಯಾಬಿನ್ ಮಾಡಿದ್ದು, ಅದರೊಳಗೆ 82 ಬಂಡಲ್ಗಳಲ್ಲಿ ಗಾಂಜಾವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.
"ಪೆಡ್ಲರ್ಗಳನ್ನು ಹಿಡಿಯುವ ನಿಟ್ಟಿನಲ್ಲಿ, ಕೆ.ಆರ್.ಪುರಂ ಪೊಲೀಸರು ಗ್ರಾಹಕರ ಸೋಗಿನಲ್ಲಿ ದಂಧೆಕೋರರನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಆರೋಪಿಗಳು ಕೆ.ಆರ್.ಪುರ ಹಳೇ ಮದ್ರಾಸ್ ರಸ್ತೆ ಟಿನ್ ಫ್ಯಾಕ್ಟರಿ ಬಳಿ ಹಣ ತರುವಂತೆ ಹೇಳಿದ್ದರು. ಹಣ ನೋಡಿದ ಬಳಿಕ ಆರೋಪಿಗಳ ವ್ಯವಹಾರ ನಡೆಸಲು ಒಪ್ಪಿಕೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ದಂಧೆಕೋರರನ್ನು ಸಂಪರ್ಕಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಹೇಳಿದ್ದಾರೆ.