ಪಾಂಡಿಚೇರಿ, ಮಾ.27 (DaijiworldNews/HR): ಪೊಲೀಸರು ಇತ್ತೀಚಿನ ದಿನಗಳನ್ನು ವಾಹನ ತಡೆದು ತಪಾಸಣೆ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಕೆಲವೊಂದು ಅಹಿತಕರ ಘಟನೆಗಳೇ ಇದಕ್ಕೆ ಸಾಕ್ಷಿಯಾಗುತ್ತಿದೆ. ಆದರೆ ಇಲ್ಲೊಂದು ವಿಶೇಷ ಘಟನೆ ಎಂಬಂತೆ ಪಾಂಡಿಚೇರಿಗೆ ತೆರಳುವ ಹೆದ್ದಾರಿಯಲ್ಲಿ ತಮಿಳುನಾಡು ಪೊಲೀಸ್ ಒಬ್ಬರು ಕರ್ನಾಟಕದ ಬೈಕ್ ಸವಾರನನ್ನು ನಿಲ್ಲಿಸಿ ಮನವಿ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.
ಪಾಂಡೇಚೇರಿಗೆ ಕರ್ನಾಟಕದ ಬೈಕ್ ಸವಾರ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಸವಾರನಿಗೆ ದೂರದಿಂದಲೇ ಪೊಲೀಸರು ನಿಲ್ಲಿಸಲು ಮನವಿ ಮಾಡಿದ್ದಾರೆ. ಬೈಕ್ ಸವಾರ ಬೈಕ್ ನಿಲ್ಲಿಸಿದ ವೇಳೆ ತಮಿಳುನಾಡು ಪೊಲೀಸ್, ಕರ್ನಾಟಕವಾ? ಎಂದು ಕೇಳಿ, ಬಳಿಕ ಪೊಲೀಸ್ ಒಬ್ಬರು ತನ್ನ ಕೈಯಲ್ಲಿರುವ ಔಷಧವನ್ನು ತೋರಿಸಿ, ಇದು ಈಗಷ್ಟೆ ಹೋಗಿರುವ ಸರ್ಕಾರಿ ಬಸ್ನಲ್ಲಿರುವ ಒಬ್ಬರು ತಾಯಿಯ ಕೈಯಿಂದ ಬಿದ್ದಿದ್ದು, ಅವರಿಗೆ ಈ ಔಷಧ ತಲುಪಿಸಿ ಎಂದಿದ್ದಾರೆ.
ಇನ್ನು ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಬಸ್ನ ಬದಿಯಲ್ಲಿ ಕುಳಿತಿದ್ದ ತಾಯಿಯ ಔಷಧಿ ಹೊರಬಿದ್ದಿದ್ದು, ಬಸ್ ವೇಗವಾಗಿ ಮುಂದೆ ಸಾಗಿದ ಕಾರಣ ಕೂಗಿದರೂ ಬಸ್ ಮುಂದೆ ಸಾಗಿದೆ.
ಹಾಗಾಗಿ ಪೊಲೀಸ್ ಔಷಧಿಯನ್ನು ಬೈಕ್ ಸವಾರನ ಬಳಿ ತಲುಪಿಸಲು ಹೇಳಿದ್ದು, ಔಷಧ ಸ್ವೀಕರಿಸಿದ ಕರ್ನಾಟಕದ ಬೈಕ್ ಸವಾರ ವೇಗವಾಗಿ ಬೈಕ್ ಚಲಾಯಿಸಿ ಬಸ್ ಚೇಸ್ ಮಾಡಿದ್ದಾನೆ. ಬಳಿಕ ಡ್ರೈವರ್ ಬಳಿ ಬಸ್ ನಿಲ್ಲಿಸುವಂತೆ ಸೂಚನೆ ನೀಡಿದ್ದು, ತಾಯಿಗೆ ಔಷಧವನ್ನು ನೀಡಿದ್ದಾರೆ.
ಇನ್ನು ಈ ಎಲ್ಲಾ ಘಟನೆ ಬೈಕ್ ಸವಾರ ಹೆಲ್ಮೆಟ್ ಕ್ಯಾಮಾರದಲ್ಲಿ ರೆಕಾರ್ಡ್ ಆಗಿದ್ದು, ಭಾರಿ ವೈರಲ್ ಆಗಿದೆ.