ಬೆಂಗಳೂರು, ಮಾ.27 (DaijiworldNews/HR): ಸಿ.ಡಿಯಲ್ಲಿದ್ದ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು, ಆದರೆ ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣದಲ್ಲಿ ಶುಕ್ರವಾರ ರಾತ್ರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಸಿಡಿ ಯುವತಿ ತಾನು ಪೋಷಕರ ಜೊತೆ ಮಾತನಾಡುತ್ತಾ ತಾನು ಡಿಕೆ ಶಿವಕುಮಾರ್ ಅವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, "ಸಿ.ಡಿಯಲ್ಲಿದ್ದ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು, ಆದರೆ ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ" ಎಂದರು.
ಇನ್ನು "ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ನಾನು ಸಹಾಯ ಮಾಡುತ್ತೇನೆ. ನಮ್ಮ ಕಚೇರಿಗೆ ದಿನಕ್ಕೆ ಬೇಕಾದಷ್ಟು ಜನರು ಬರುತ್ತಾರೆ. ಪ್ರಾಮಾಣಿಕವಿದ್ದರೆ ಅವರಿಗೆಲ್ಲ ಸಹಾಯ ಮಾಡುತ್ತೇನೆ. ಸಿಡಿ ಯುವತಿ ವಿಷಯ ಕೂಡ ಹಾಗೆ, ಭೇಟಿಯಾಗಲು ಬಂದರೆ ನಾನು ನೆರವು ನೀಡುತ್ತೇನೆ" ಎಂದಿದ್ದಾರೆ.
ತನ್ನ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ವ್ಯಂಗ್ಯವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸುಸಿದ ಅವರು, "ನನ್ನ ಬಗ್ಗೆ ರಮೇಶ್ಗೆ ಅನುಕಂಪವಿದ್ದರೆ ನನಗೆ ಬಹಳ ಸಂತೋಷ" ಎಂದು ಹೇಳಿದ್ದಾರೆ.