ಬೆಂಗಳೂರು, ಮಾ 27 (DaijiworldNews/MS): ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾಗೃತೆಯ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
"ಕೋವಿಡ್ ಪಾಸಿಟಿವ್ ಆಗಿರುವ ಕಾರಣ, ಮುಂಜಾಗೃತೆಯ ದೃಷ್ಟಿಯಿಂದ ನಾನು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿ. ಕೋವಿಡ್ ರೋಗಲಕ್ಷಣಗಳು ಹೆಚ್ಚಿಲ್ಲದಿದ್ದರು ಸಹ ನನಗೆ ಈ ಹಿಂದೆ ಅಸ್ತಮಾ ಇದ್ದ ಕಾರಣ, ನಾನು ನನ್ನ ಪಾಲಕರ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ.
ಸಾರ್ವಜನಿಕರಿಗೆ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಕಚೇರಿಗೆ ಕರೆಮಾಡಬೇಕಾಗಿ ಕೋರುತ್ತೇನೆ.ಕೋವಿಡ್ 2ನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಕೈಗೊಂಡು ಮಾಸ್ಕ್ ಧರಿಸಿ. ಎಲ್ಲರಿಗೂ ಲಸಿಕೆ ನೀಡುವ ವಿಧಾನವನ್ನು ತ್ವರಿತಗೊಳಿಸಬೇಕೆಂದು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ" ಎಂದು ಶಾಸಕಿ ಸೌಮ್ಯಾ ರೆಡ್ಡಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.