ಬೆಂಗಳೂರು, ಮಾ.27 (DaijiworldNews/PY): "ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ಗಮನದಲ್ಲಿಟ್ಟುಕೊಂಡು ಮೋಟಾರು ವಾಹನಗಳ ದಾಖಲೆಗಳಾದ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್ಸಿ) ಹಾಗೂ ಪರ್ಮಿಟ್ ಮಾನ್ಯತೆಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ" ಎಂದು ಕೇಂದ್ರ ಸಾರಿಗೆ ಸಚಿವಾಲಯ ಘೋಷಿಸಿದೆ.
ಜೂನ್ 30ರವರೆಗೆ ದಾಖಲೆಗಳನ್ನು ನ್ಯಾಯಸಮ್ಮತವೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಈ ಎಲ್ಲಾ ದಾಖಲೆಗಳ ನವೀಕರಣಕ್ಕೆ ಮಾರ್ಚ್ 31, 2021ರವರೆಗೆ ಅವಕಾಶ ನೀಡಲಾಗಿತ್ತು.
"ದೇಶದಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಲಾಕ್ಡೌನ್ ಅಥವಾ ಕೊರೊನಾದ ಕಠಿಣ ನಿಯಮಗಳಿಂದ ವಾಹನ ದಾಖಲೆಗಳ ಸಿಂಧುತ್ವವನ್ನು ವಿಸ್ತರಣೆ ಮಾಡಲು ಅನೇಕ ಮಂದಿಗೆ ಸಾಧ್ಯವಾಗಿಲ್ಲ. ದಾಖಲೆಗಳ ಸಿಂಧುತ್ವ ಫೆಬ್ರವರಿ 1,2021ರಲ್ಲಿ ಮುಕ್ತಾಯವಾಗಿದ್ದರೂ ಕೂಡಾ ಅದನ್ನು ಜೂನ್ 30, 2021ರವರೆಗೆ ಮಾನ್ಯ ಮಾಡಲಾಗುವುದು" ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
"ಕಷ್ಟದ ಸಂದರ್ಭ ಕೆಲಸ ಮಾಡುವ ನಾಗರಿಕರು ಸೇರಿದಂತೆ ಹಲವು ಸಂಸ್ಥೆಗಳಿಗೆ ಇದರಿಂದ ತೊಂದರೆ ಉಂಟಾಗಬಾರದು" ಎಂದು ಸಚಿವಾಲಯ ಹೇಳಿದೆ.
ಮೋಟಾರು ವಾಹನ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989ಕ್ಕೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮಾರ್ಚ್ 30, 2020, ಜೂನ್ 9, 2020, ಆಗಸ್ಟ್ 24, 2020 ಹಾಗೂ ಡಿಸೆಂಬರ್ 27, 2020 ಸೇರಿದಂತೆ ನಾಲ್ಕು ಬಾರಿ ವಿಸ್ತರಿಸಿತ್ತು.