ಬೆಂಗಳೂರು, ಮಾ.27 (DaijiworldNews/MB) : ಓರ್ವ ಅತ್ಯಾಚಾರ ಆರೋಪಿ ಸರ್ಕಾರ ಉರುಳಿಸುವ ಬೆದರಿಕೆಗಳನ್ನು ಹಾಕಿಕೊಂಡು ರಾಜಾರೋಷವಾಗಿ ತಿರುಗುತ್ತಿರುವುದು ಬಹುಶಃ ಇದೇ ಮೊದಲೇನೋ ಎಂದು ಹೇಳಿರುವ ಕಾಂಗ್ರೆಸ್, ಅಶ್ಲೀಲ ಸಿಡಿ ಪ್ರಕರಣದಲ್ಲಿ ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.
ಸಿಡಿಯಲ್ಲಿರುವ ಯುವತಿ ಶುಕ್ರವಾರ ಲಿಖಿತ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾರಕಿಹೊಳಿ, "ಮೈತ್ರಿ ಸರ್ಕಾರವನ್ನೇ ಉರುಳಿಸಿದ್ದೇವೆ, ಇನ್ನು ಇದ್ಯಾವ ಲೆಕ್ಕ. ನಮ್ಮ ಆಟ ಇನ್ನು ಪ್ರಾರಂಭವಾಗಲಿದೆ. ಶೀಘ್ರದಲ್ಲೇ ಈ ಸಿಡಿ ಹಿಂದಿನ ಮಹಾನಾಯಕನನ್ನು ಬಹಿರಂಗಪಡಿಸುವ ಮೂಲಕ ಬಾಂಬ್ ಸಿಡಿಸಲಿದ್ದೇನೆ" ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಅತ್ಯಾಚಾರ ಆರೋಪಿ ಸರ್ಕಾರವನ್ನೇ ಉರುಳಿಸಿಬಿಡಬಲ್ಲೆ, ಬಾಂಬ್ ಹಾಕುತ್ತೇನೆ, ಮತ್ತೊಂದು ಮಾಡುತ್ತೇನೆ ಎನ್ನುವ ಬೆದರಿಕೆ ಹಾಕುತ್ತಾ ರಾಜಾರೋಷವಾಗಿ ತಿರುಗುತ್ತಿರುವುದು ಬಹುಶಃ ಇದೇ ಮೊದಲೇನೋ'' ಎಂದು ಹೇಳಿದೆ. ''ಕೂಡಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು'' ಎಂದು ಆಗ್ರಹಿಸಿರುವ ಕಾಂಗ್ರೆಸ್, ''ಪ್ರಕರಣ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ'' ಎಂದು ಹೇಳಿದೆ.
''ಬಿಜೆಪಿ ತಾನು ಮಹಿಳಾ ವಿರೋಧಿ ಎನ್ನುವುದನ್ನ ಪದೇ ಪದೇ ಸಾಬೀತುಪಡಿಸುತ್ತಿದೆ. ಮಹಾಲಿಂಗಪುರದಲ್ಲಿ ದಲಿತ ಮಹಿಳೆ ಚಾಂದಿನಿ ನಾಯ್ಕ್ ಅವರ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಸಿದ್ದು ಸವದಿಯನ್ನೂ ಬಂಧಿಸದೆ ರಕ್ಷಿಸಿತ್ತು ಸರ್ಕಾರ. ಈಗ ಅತ್ಯಾಚಾರಿ ರಮೇಶ್ ಜಾರಕಿಹೊಳಿಯನ್ನೂ ಬಂಧಿಸದೆ ರಕ್ಷಿಸುತ್ತಿದೆ'' ಎಂದು ಕೂಡಾ ಕಾಂಗ್ರೆಸ್ ಆರೋಪಿಸಿದೆ.
ಇನ್ನು ಈ ಸಿಡಿ ಯುವತಿ ಈಗಾಗಲೇ ನಾಲ್ಕು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು ಈ ನಾಲ್ಕನೇ ವೀಡಿಯೋದಲ್ಲಿ ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಟಾರ್ಚರ್ ಆಗುತ್ತಿದೆ.. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. "ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸಬಹುದು ಎಂದು ಹೇಳುತ್ತಾರೆ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ?'' ಎಂದು ಪ್ರಶ್ನಿಸಿದ್ದಾಳೆ.