ಬೆಂಗಳೂರು, ಮಾ.27 (DaijiworldNews/PY): ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ರಾಜ್ಯದಲ್ಲಿ ಕೊರೊನಾ ಉಲ್ಬಣಕ್ಕೆ ಬಿಜೆಪಿ ಸರ್ಕಾರದ ಅಸಾಮರ್ಥ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ" ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ರಾಜ್ಯದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ,2020ರ ಡಿಸೆಂಬರ್ ವರೆಗಿನ ಕೊರೊನಾ ಸಾವಿನ ಸಂಖ್ಯೆ- 12,090.ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ- 22,320. ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸುಧಾಕರ್, ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು?" ಎಂದು ಪ್ರಶ್ನಿಸಿದ್ದಾರೆ.
"ಕೊರೊನಾ ಉಲ್ಬಣಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಅಸಾಮರ್ಥ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ ಎಂದು ಮೊದಲ ದಿನದಿಂದ ಹೇಳುತ್ತಾ ಬಂದಿದ್ದೇನೆ. ತಪ್ಪನ್ನು ತಿದ್ದುಕೊಳ್ಳದೇ ಎಲ್ಲವನ್ನು ಸಮರ್ಥಿಸಿಕೊಂಡ ಸರ್ಕಾರದ ಲಜ್ಜೆಗೇಡಿತನದ ಫಲವನ್ನು ರಾಜ್ಯದ ಜನರು ಅನುಭವಿಸಬೇಕಾಗಿದೆ" ಎಂದು ಕೆಂಡಕಾರಿದ್ದಾರೆ.
"ರಾಜ್ಯ ಸರ್ಕಾರ ಸುಳ್ಳು ಹೇಳಿರುವುದು ಕೊರೊನಾ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ, ಮಾಸ್ಕ್, ಸ್ಯಾನಿಟೈಸರ್, ಪಿಪಿ ಕಿಟ್ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಸುಳ್ಳು ಹೇಳುತ್ತಲೇ ಇದ್ದಾರೆ" ಎಂದು ಆರೋಪಿಸಿದ್ದಾರೆ.
"ಕೊರೊನಾ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಿ ನಿಜಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕು. ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ" ಎಂದಿದ್ದಾರೆ.