ಮುಂಬೈ, ಮಾ.27 (DaijiworldNews/PY): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸ್ವತಃ ಸಚಿನ್ ಅವರೇ ಟ್ವೀಟ್ ಮೂಲಕ ಈ ವಿಚಾರವನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾನು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇನೆ. ಕೊರೊನಾ ಸೋಂಕಿನ ಅಲ್ಪಸ್ವಲ್ಪ ಲಕ್ಷಣಗಳಿವೆ. ಮನೆಯಲ್ಲಿ ಉಳಿದವರಿಗೆ ಕೊರೊನಾ ನೆಗೆಟಿವ್ ಬಂದಿದೆ" ಎಂದಿದ್ದಾರೆ.
"ಈಗ ನಾನು ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ದು, ನನ್ನ ವೈದ್ಯರು ಸೂಚಿಸಿದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಿದ್ದೇನೆ. ಕೊರೊನಾ ವಿರುದ್ದ ಹೋರಾಡುತ್ತಿರುವ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ, ದೇಶದ ನನ್ನ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಅಮೀರ್ ಖಾನ್, ನಟ ಮಾಧವನ್, ನಟಿ ತಮನ್ನಾ ಭಾಟಿಯಾ, ಪರೇಶ್ ರಾವಲ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ನಟರಾದ ರಣಬೀರ್ ಕಪೂರ್, ಸಿದ್ಧಾಂತ್ ಚತುರ್ವೇದಿ, ಮನೋಜ್ ಬಾಜಪೇಯಿ, ತಾರಾ ಸುತಾರಿಯಾ ಮುಂತಾದವರಿಗೆ ಕೊರೊನಾ ಸೋಂಕು ತಗುಲಿತ್ತು.