ಪುಣೆ, ಮಾ.27 (DaijiworldNews/PY): "ಮಹಾರಾಷ್ಟ್ರದ ಪುಣೆ ಕ್ಯಾಂಪ್ ಪ್ರದೇಶದಲ್ಲಿರುವ ಪ್ರಸಿದ್ದ ಫ್ಯಾಷನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 500ಕ್ಕೂ ಅಧಿಕ ಅಂಗಡಿಗಳು ಬೆಂಕಿಗೆ ಆಹುತಿ ಆಗಿವೆ" ಎಂದು ಶನಿವಾರ ಅಧಿಕಾರಿಗಳು ಹೇಳಿದ್ದಾರೆ.
"ಫ್ಯಾಷನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
"ಬೆಂಕಿ ಹೊತ್ತಿಕೊಂಡ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಡಿಹಿತಿ ನೀಡಿದ್ದು, ಈ ವೇಳೆ 16 ಅಗ್ನಿಶಾಮಕ ವಾಹನಗಳು ಹಾಗೂ ನೀರಿನ ಟ್ಯಾಂಕರ್ ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಪ್ರಾರಂಭಿಸಿವೆ" ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
"ಬೆಳಗ್ಗೆ 1 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೆ, ಆ ವೇಳೆಗಾಗಲೇ 500ಕ್ಕೂ ಅಧಿಕ ಅಂಗಡಿಗಳು ಅಗ್ನಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ" ಎಂದಿದ್ದಾರೆ.
"ಬೆಂಕಿ ಅವಘಡಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.