ಬೆಂಗಳೂರು, ಮಾ.25 (DaijiworldNews/PY): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ನಡುವೆ ನಡೆಯುತ್ತಿರುವ ವಾಗ್ಯುದ್ದಕ್ಕೆ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದ್ದು, "ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ. ನಮ್ಮನ್ನೇ ನಂಬಿದ ಕುಟುಂಬಸ್ಥರಿಗೆ ಎಂದಿಗೂ ಅಪಮಾನವಾಗಬಾರದು" ಎಂದು ಹೇಳಿದ್ದಾರೆ.
"ಸಮಾಜವನ್ನೇ ಶಂಕೆಗೆ ದೂಡಿದವರು ತಾವು ಸೃಷ್ಟಿ ಮಾಡಿದ ಅನಾಹುತದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳಿಕೆ ತಮ್ಮದೇ ಕುಟುಂಬದಲ್ಲಿ ಸೃಷ್ಟಿ ಮಾಡಿರಬಹುದಾದ ಅಪನಂಬಿಕೆಯನ್ನು ಒಮ್ಮೆ ಗಮನಿಸಬೇಕು. ಸಮಾಜದ ಡೊಂಕು ಪ್ರಶ್ನಿಸಿದವರು ತಮ್ಮ ಕುಟುಂಬದ ದೃಷ್ಟಿಯಲ್ಲಿ ದೊಡ್ಡವರಾದರೋ? ಸಣ್ಣವರಾದರೋ? ನಂಬಿಕೆ ಉಳಿಸಿಕೊಂಡರೋ, ಕಳೆದುಕೊಂಡರೋ?" ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಸುಧಾಕರ್, "ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ವಿವಾಹೇತರ ಸಂಬಂಧ ಇದೆ ಎನ್ನುವ ವಿಚಾರದ ಬಗ್ಗೆ ತನಿಖೆ ಆಗಬೇಕು. ನೈತಿಕತೆ ಪ್ರಶ್ನೆ ಬಂದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಕುಮಾರ್, ಕೆಪಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುನಿಯಪ್ಪ ಎಲ್ಲರೂ ಹರಿಶ್ಚಂದ್ರರು, ಏಕಪತ್ನಿವ್ರತಸ್ಥರು, ಸಮಾಜಕ್ಕೆ ಮಾದರಿಯಾದವರು. ಇವರೂ ಕೂಡಾ ತನಿಖೆಗೆ ಒಪ್ಪಿಕೊಳ್ಳಬೇಕು. ನನ್ನನ್ನು ಸೇರಿಸಿ ಎಲ್ಲರ ಬಂಡವಾಳ ಏನೂ ಎಂದು ತಿಳಿಯುತ್ತಿತ್ತು" ಎಂದು ಸವಾಲೆಸೆದಿದ್ದರು.
ಈ ವಿಚಾರದ ಬಗ್ಗೆ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್, "ಯಾರೂ ಕೂಡಾ ಶ್ರೀರಾಮಚಂದ್ರ, ಸೀತಾಮಾತೆಯರಲ್ಲ. ಒಂದು ಬೆರಳು ಬೇರೆಯವರನ್ನು ತೋರಿಸಿದರೆ, ಉಳಿದ ನಾಲ್ಕು ಬೆರಳು ಅವರ ಕಡೆಯೇ ತೋರಿಸುತ್ತದೆ. ಎಲ್ಲರೂ ಕೂಡಾ ಅವರವರ ಆತ್ಮವನ್ನು ಮುಟ್ಟಿ ನೋಡಿಕೊಳ್ಳಲಿ" ಎಂದು ಹೇಳಿದ್ದರು.