ಬೆಂಗಳೂರು, ಮಾ.25 (DaijiworldNews/HR): ಭಾರತದಲ್ಲಿ ರೂಪಾಂತರಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, 700 ಕ್ಕೂ ಅಧಿಕ ರೂಪಾಂತರಿ ಕೊರೊನಾ ಪತ್ತೆಯಾಗಿದ್ದು, ಕರ್ನಾಟಕದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದ ಜನರು ಎಚ್ಚರಿಕೆಯಿಂದ ಇರಿ, ನಿರ್ಲಕ್ಷ್ಯ ಮಾಡಬೇಡಿ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಳವಾಗುತ್ತಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ" ಎಂದರು.
"ಭಾರತಕ್ಕೆ 700 ಕ್ಕೂ ಅಧಿಕ ರೂಪಾಂತರಿ ಕೊರೊನಾ ವೈರಸ್ ಗಳು ದಾಖಲಾಗಿದ್ದು, ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುತ್ತೆ. ಹೀಗಾಗಿ ಜನರು ಇನ್ನು 2 ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು" ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಲಸಿಕೆ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, "ನೆನ್ನೆ ತಡರಾತ್ರಿ ರಾಜಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಆಗಮಿಸಿದ್ದು, ಕೇಂದ್ರ ಸರ್ಕಾರದ ಭರವಸೆಯಂತೆ ಈ ವಾರದೊಳಗೆ ಇನ್ನೂ 12 ಲಕ್ಷ ಡೋಸ್ ಲಸಿಕೆ ರವಾನೆಯಾಗಲಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಸಿಕೆಯ ಕೊರತೆ ಉಂಟಾಗದಂತೆ ಕ್ರಮ ಕೈಗೊಂಡಿದ್ದು,ಎಲ್ಲ ಅರ್ಹ ನಾಗರೀಕರು ಕೂಡಲೇ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಕೋರುತ್ತೇನೆ" ಎಂದಿದ್ದಾರೆ.