ಬೆಂಗಳೂರು, ಮಾ.25 (DaijiworldNews/PY): "ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ. ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು?" ಎಂದು ಪ್ರಶ್ನಿಸಿದ್ದಾರೆ.
"ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ, ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ. ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು" ಎಂದು ಒತ್ತಾಯಿಸಿದ್ದಾರೆ.