ಚಿಕ್ಕಮಗಳೂರು, ಮಾ.25 (DaijiworldNews/MB) : ಹೃದಯಾಘಾತದಿಂದ 7ನೇ ತರಗತಿ ಬಾಲಕನೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಗುರುವಾರ ನಡೆದಿದೆ.
ಮೃತ ಬಾಲಕನನ್ನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಸೋಹನ್ ರಾಮ್ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಮೆಸ್ಕಾಂ ಕಚೇರಿ ಸಮೀಪದಲ್ಲಿ ಸೈಕಲ್ ಓಡಿಸುತ್ತಿದ್ದ ಬಾಲಕ ಒಮ್ಮೆಲೇ ಕುಸಿದು ಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದು ದಾರಿ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ವೈದ್ಯರು ಈ 7ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂಬ ಆಘಾತಕಾರಿ ವಿಚಾರವನ್ನು ತಿಳಿಸಿದ್ದಾರೆ.
ಇತ್ತೀಚೆಗೆ ಪುತ್ತೂರಿನಲ್ಲಿಯೂ ಇಂತಹದ್ದೆ ಘಟನೆ ನಡೆದಿದೆ. 16 ವರ್ಷ ವಯಸ್ಸಿನ ಬಾಲಕಿ ಬೆಳ್ಳಂಬೆಳಗ್ಗೆ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ಈಕೆಯೂ ಕೂಡಾ ಸಣ್ಣ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.