ಪಾಲಕ್ಕಾಡ್, ಮಾ.25 (DaijiworldNews/PY): ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಖಂಡಿತವಾಗಿಯೂ ಗೆಲುವು ಸಿಗುವ ಬಗ್ಗೆ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರು ಭರವಸೆ ವ್ಯಕ್ತಪಡಿಸಿದ್ದು, "ಬಿಜೆಪಿಗೆ ಕೇರಳದಲ್ಲಿ ಬಹುಮತ ಸಿಗಬಹುದು ಅಥವಾ ಕಿಂಗ್ ಮೇಕರ್ ಆಗಲು ಸಾಕಷ್ಟು ಸ್ಥಾನಗಳು ದೊರಕಬಹುದು" ಎಂದು ತಿಳಿಸಿದ್ದಾರೆ.
"ಕೇರಳದಲ್ಲಿ ಬಿಜೆಪಿಗೆ ಉತ್ತಮವಾದ ಭವಿಷ್ಯವಿದೆ. ಈ ಬಾರಿ ಬಿಜೆಪಿ ಬಹುಮತ ಪಡೆದುಕೊಂಡು ಕಿಂಗ್ ಮೇಕರ್ ಆಗಲಿದೆ. ಬಿಜೆಪಿಗೆ ಮತ ಹಾಕುವುದರಿಂದ ಕೇರಳದ ಅಭಿವೃದ್ದಿಗೆ ನೆರವಾಗಲಿದೆ. ಕೇರಳದಲ್ಲಿ ಬಿಜೆಪಿ ಬಹುಮತ ಪಡೆಯುವ ನಿರೀಕ್ಷೆ ಇದೆ" ಎಂದಿದ್ದಾರೆ.
"ಪಾಲಕ್ಕಾಡ್ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ರಾಜ್ಯಕ್ಕೆ ಕೈಗಾರಿಕೆಗಳು ಮಾತ್ರವೇ ಸಂಪತ್ತನ್ನು ತಂದುಕೊಡಬಲ್ಲವು. ಕೇರಳದಲ್ಲಿ ಹೆಚ್ಚು ನಿರುದ್ಯೋಗವಿದ್ದು, ಉದ್ಯೋಗ ಸೃಷ್ಟಿಯ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.
"ನಾನು ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಭ್ರಷ್ಟಾಚಾರ ರಹಿತ, ಪಾರದರ್ಶಕ ಸರ್ಕಾರವನ್ನು ತರಲು ಕಾರ್ಯ ನಿರ್ವಹಿಸುತ್ತೇನೆ" ಎಂದು ತಿಳಿಸಿದ್ದಾರೆ.
ಶ್ರೀಧರನ್ ಅವರು ಭಾರತದ ಮೆಟ್ರೋ ಮ್ಯಾನ್ ಎಂದು ಪ್ರಸಿದ್ದರಾಗಿದ್ದು, 2011ರಲ್ಲಿ ದೆಹಲಿ ಮೆಟ್ರೋ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.