ನವದೆಹಲಿ, ಮಾ.24 (DaijiworldNews/MB) : ನಿಕಿತಾ ತೋಮರ್ ಕೊಲೆ ಪ್ರಕರಣದಲ್ಲಿ, ಫರಿದಾಬಾದ್ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಪ್ರಮುಖ ಆರೋಪಿ ತೌಸಿಫ್ ಹಾಗೂ ಸ್ನೇಹಿತ ರೆಹಾನ್ನನ್ನು ದೋಷಿಗಳೆಂದು ಬುಧವಾರ ತೀರ್ಪು ನೀಡಿದ್ದು, ಇದರ ಶಿಕ್ಷೆ ಪ್ರಮಾಣವನ್ನು ಮಾರ್ಚ್ 26 ರ ಶುಕ್ರವಾರದಂದು ನೀಡಲಾಗುವುದು ಎಂದು ತಿಳಿಸಿದೆ.
ತೌಸಿಫ್ ಇಸ್ಲಾಂಗೆ ಮತಾಂತರಗೊಂಡು ತನ್ನನ್ನು ಮದುವೆಯಾಗುವಂತೆ ನಿಕಿತಾಗೆ ಒತ್ತಾಯಿಸಿದ್ದು ಆಕೆ ನಿರಾಕರಿಸಿದ ಕಾರಣ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ 21 ವರ್ಷದ ಯುವತಿ ನಿಕಿತಾ ತೋಮರ್ನನ್ನು ಕೊಲೆ ಮಾಡಿದ್ದಕ್ಕಾಗಿ ಪ್ರಧಾನ ಆರೋಪಿ ತೌಸಿಫ್ ಮತ್ತು ಆತನ ಸ್ನೇಹಿತ ರೆಹಾನ್ನನ್ನು ಫರಿದಾಬಾದ್ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು ಆರೋಪಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ ಮೂರನೇ ಆರೋಪಿ ಅಜ್ರುದ್ದೀನ್ನನ್ನು ಖುಲಾಸೆ ಮಾಡಿದೆ. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಘೋಷಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ನಿಕಿತಾ ತೋಮರ್ ಎಂಬ 20 ವರ್ಷದ ಬಾಲಕಿಯನ್ನು 2020 ರ ಅಕ್ಟೋಬರ್ 26 ರಂದು ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಕಾಲೇಜಿನ ಹೊರಗೆ ಹಾಡುಹಗಲೇ ಇಬ್ಬರು ಗುಂಡಿಕ್ಕಿ ಕೊಂದಿದ್ದರು. ಅಪರಾಧವು ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಹಾಗೆಯೇ ವೈರಲ್ ಆಗಿತ್ತು. ಈ ಕೊಲೆ ಪ್ರಕರಣದ ವಿಚಾರಣೆ 2020 ರ ಡಿಸೆಂಬರ್ 1 ರಂದು ಪ್ರಾರಂಭವಾಯಿತು.
ನಿಕಿತಾ ಕೊಲೆಗೂ ಕೆಲವು ತಿಂಗಳ ಮೊದಲು ನಿಕಿತಾ ತೋಮರ್ ತೌಸಿಫ್ ಕಿರುಕುಳ ದೂರು ದಾಖಲಿಸಿದ್ದಳು. ಆದರೆ, ನಂತರ ಕುಟುಂಬ ಈ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಬಳಿಕ ಆತ ಪುನಃ ತಮ್ಮ ಮಗಳಿಗೆ ಇಸ್ಲಾಂಗೆ ಮತಾಂತರವಾಗಿ ಆತನನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದ ಎಂದು ಆಕೆಯ ಕುಟುಂಬ ಆರೋಪಿಸಿತ್ತು.
ವರದಿಯ ಪ್ರಕಾರ, 1975 ರಲ್ಲಿ ಹರಿಯಾಣದ ನುಹ್ ಕ್ಷೇತ್ರದಿಂದ ಮತ್ತು 1982 ರಲ್ಲಿ ತೌರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್ ಮುಖಂಡ ಕಬೀರ್ ಅಹ್ಮದ್ ಅವರ ಮೊಮ್ಮಗ ತೌಸಿಫ್.