ಮುಂಬೈ, ಮಾ.24 (DaijiworldNews/MB) : ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ''ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವುದಾದರೆ, ಮೂರು ದಿನಗಳ ಮೊದಲೇ ಅವರಿಗೆ ನೋಟಿಸ್ ನೀಡಬೇಕು'' ಎಂದು ಬಾಂಬೆ ಹೈಕೋರ್ಟ್ ಬುಧವಾರ ಮುಂಬೈ ಪೊಲೀಸರಿಗೆ ತಿಳಿಸಿದೆ.
ಟಿಆರ್ಪಿ ಹಗರಣದಲ್ಲಿ ಹಲವು ರೀತಿಯ ಪರಿಹಾರಗಳನ್ನು ಕೋರಿ ಅರ್ನಬ್ ಗೋಸ್ವಾಮಿ ಮತ್ತು ಎಆರ್ಜಿ ಮೀಡಿಯಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿತು. ಅರ್ನಬ್ ಗೋಸ್ವಾಮಿ ಮತ್ತು ಎಆರ್ಜಿ ಮೀಡಿಯಾ ಸಲ್ಲಿಸಿದ್ದ ಅರ್ಜಿಯಲ್ಲಿ, ''ಮುಂಬೈ ಪೊಲೀಸ್ನ ಕ್ರೈ ಬ್ರಾಂಚ್ ಅಧಿಕಾರಿಗಳ ಬಳಿ ನಮ್ಮ ವಿರುದ್ಧ ಯಾವುದೇ ಸಾಕ್ಷಿಯಿಲ್ಲ. ಆದರೂ ದೋಷಾರೋಪಪಟ್ಟಿಯಲ್ಲಿ ಶಂಕಿತ ಆರೋಪಿಗಳ ಹೆಸರನ್ನು ಸೇರಿಸಿ, ಪ್ರಕರಣದ ತನಿಖೆಯನ್ನು ವಿಳಂಬ ಮಾಡುತ್ತಿದೆ'' ಎಂದು ದೂರಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ, ಮಹಾರಾಷ್ಟ್ರ ಸರ್ಕಾರವು ರಿಪಬ್ಲಿಕ್ ಟಿವಿ ಮತ್ತು ಎಆರ್ಜಿ ಔಟ್ಲಿಯರ್ ಮಾಧ್ಯಮದ ಎಲ್ಲ ಸಿಬ್ಬಂದಿ ವಿರುದ್ಧದ ತನಿಖೆಯನ್ನು 12 ವಾರದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದೆ. ಇದಕ್ಕೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಟೇಲ್ ಅವರನ್ನೊಳಗೊಂಡ ಪೀಠ ಸಮ್ಮತಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವುದಾದರೆ, ಮೂರು ದಿನಗಳ ಮೊದಲೇ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದೆ.