ಬೆಂಗಳೂರು, ಮಾ.24 (DaijiworldNews/MB) : ''ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಕಳಂಕ ತೊಳೆದುಕೊಂಡು ಬನ್ನಿ'' ಎಂದು ಆರೋಗ್ಯ ಸಚಿವ ಕೆ. ಸುಧಾಕರ್ಗೆ ಸವಾಲೆಸೆದಿರುವ ಕಾಂಗ್ರೆಸ್, ''ಕಂಡವರ ಹೆಂಡಿರ ಲೆಕ್ಕ ಹಾಕೋ ಮುನ್ನ ರಾಜ್ಯದ ಕೊರೊನಾ ಕೇಸ್ ಲೆಕ್ಕ ಗಮನಿಸಿ'' ಎಂದು ಟಾಂಗ್ ನೀಡಿದೆ. ಸಿಡಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಕೆ. ಸುಧಾಕರ್ ಅವರು ನೀಡಿದ ಹೇಳಿಕೆಯು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ಮೂಲಕ ಸುಧಾಕರ್ ಹಾಗೂ ಬಿಜೆಪಿ ಸರ್ಕಾರದ ವಿರುದ್ದ ನಿರಂತರ ಟೀಕೆ ಮಾಡುತ್ತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ಕೆ. ಸುಧಾಕರ್ ಅವರು, "ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು, ಡಿಕೆಶಿ, ಕುಮಾರಸ್ವಾಮಿ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿ" ಎಂದು ಹೇಳಿದ್ದರು.
ಈ ಹೇಳಿಕೆಯ ವಿರುದ್ದ ಕಾಂಗ್ರೆಸ್, ಜೆಡಿಎಸ್ ಮುಖಂಡರು ಸುಧಾಕರ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಂತೆ ಟ್ವೀಟ್ ಮಾಡಿರುವ ಸುಧಾಕರ್, ''ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು'' ಎಂದು ಹೇಳಿದ್ದಾರೆ.
ಈ ಟ್ವೀಟ್ಗೆ ತಿರುಗೇಟು ನೀಡುವ ಮೂಲಕ ಸುಧಾಕರ್ಗೆ ಸವಾಲು ಎಸೆದಿರುವ ಕಾಂಗ್ರೆಸ್, ''ಸುಧಾಕರ್ ಅವರೇ, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತರುವ ಮೂಲಕ ನೀವು ಏಕಪತ್ನಿ ವ್ರತಸ್ಥರಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದೀರಿ. ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಕಳಂಕ ತೊಳೆದುಕೊಂಡು ಬನ್ನಿ ಎಂದು ಹೇಳಿದೆ. ಅಲ್ಲದೇ, ಅಂದಹಾಗೆ ಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ರಾಜ್ಯದಲ್ಲಿ ಏರುತ್ತಿರುವ ಕೊರೊನಾ ಕೇಸ್ಗಳ ಲೆಕ್ಕ ಗಮನಿಸಿ'' ಎಂದು ಟಾಂಗ್ ನೀಡಿದೆ.
''ಬಿಜೆಪಿ ಪಕ್ಷದವರೇ, ನೀವು ನಿಜವಾಗಿಯೂ ಶ್ರೀರಾಮನ ಭಕ್ತರೇ ಆಗಿದ್ದರೆ, ರಾಮನ ಆದರ್ಶ ಪಾಲಿಸಿ. ಮೊದಲು ನೀವು ವಿಧಾನಸೌಧದ ಎದುರು ಅಗ್ನಿಪರೀಕ್ಷೆ ಎದುರಿಸಿ ತಾವೆಲ್ಲಾ ಪವಿತ್ರರು ಎಂದು ನಿರೂಪಿಸಿ! ಇಲ್ಲವಾದಲ್ಲಿ 6 ಸಿಡಿ ಕಳಂಕಿತ ಸಚಿವರ ರಾಜೀನಾಮೆ ಪಡೆಯಿರಿ'' ಎಂದು ಆಗ್ರಹಿಸಿದೆ.
ಹಾಗೆಯೇ ''ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಸೋಂಕಿತ ಸರ್ಕಾರ, ಬ್ಲಾಕ್ಮೇಲ್ ಸರ್ಕಾರ, ಆಪರೇಷನ್ ಸರ್ಕಾರ, ಸಿಡಿ ಸರ್ಕಾರ, ಭ್ರಷ್ಟ ಸರ್ಕಾರ, ಅತೃಪ್ತರ ಸರ್ಕಾರ, ಬಿಎಸ್ವೈ ಫ್ಯಾಮಿಲಿ ಸರ್ಕಾರ ಎಂಬ ಹೆಸರಿನ ಜೊತೆ ಈಗ ಹೊಸದಾಗಿ ಅನೈತಿಕ ಸಂಬಂಧಗಳ ಸರ್ಕಾರ ಎಂಬ ಹೆಸರು ಸೇರಿದೆ'' ಎಂದು ಲೇವಡಿ ಮಾಡಿದೆ.