ನವದೆಹಲಿ, ಮಾ.24 (DaijiworldNews/MB) : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧ ಭ್ರಷ್ಟ ಕೃತ್ಯದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಹಾಗೆಯೇ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದು ಮಾಡಿದೆ.
"ಅರ್ಜಿದಾರರು ಕೆಲವು ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಸಚಿವರು ಕೂಡ ಆರೋಪಗಳನ್ನು ಮಾಡುತ್ತಿದ್ದಾರೆ. ನೀವು ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಬಾರದು? ಈ ವಿಷಯವು ತುಂಬಾ ಗಂಭೀರವಾಗಿದೆ ಎಂಬುದರಲ್ಲಿ ನಮಗೆ ಸಂದೇಹವಿಲ್ಲ, ಇದು ಗಂಭೀರವಾದ ವಿಷಯ ಹೌದು. ಇದು ಆಡಳಿತದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಿಮಗೆ ಹೈಕೋರ್ಟ್ ಅನ್ನು ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ'' ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿ ಅವರ ನ್ಯಾಯಪೀಠ ಹೇಳಿದೆ.
ಈಗ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಝೆ ಅವರಲ್ಲಿ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ಅನಿಲ್ ದೇಶ್ಮುಖ್ ಹೇಳಿದ್ದಾರೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಂಗ್ ಆರೋಪಿಸಿದ್ದರು. ಹಾಗೆಯೇ ಈ ಅರ್ಜಿಯಲ್ಲಿ ದೇಶ್ಮುಖ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ಮುಂಬೈನ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದರು, ವರ್ಗಾವಣೆ ಮತ್ತು ಪೋಸ್ಟಿಂಗ್ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ಅರ್ಜಿಯಲ್ಲಿ ಸಿಂಗ್, "ಸಿಬಿಐಗೆ ತಕ್ಷಣದ ನಿರ್ದೇಶನ ನೀಡದಿದ್ದರೆ ದೇಶ್ಮುಖ್ ಅವರ ನಿವಾಸದಲ್ಲಿ ಸಿಸಿಟಿವಿ ಕ್ಯಾಮೆರಾ ತುಣುಕಿನಂತಹ ಸಾಕ್ಷ್ಯಗಳು ನಾಶವಾಗಬಹುದು" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಬೈನ ಪೊಲೀಸ್ ಮುಖ್ಯಸ್ಥರಾಗಿ ಅವರನ್ನು ತೆಗೆದುಹಾಕಿದ ನಂತರ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂಟು ಪುಟಗಳ ಪತ್ರದಲ್ಲಿ ದೇಶಮುಖ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ತರುವಾಯ ಅವರನ್ನು ಮಹಾರಾಷ್ಟ್ರ ಹೋಮ್ ಗಾರ್ಡ್ಗೆ ವರ್ಗಾಯಿಸಲಾಯಿತು.