ಬೆಂಗಳೂರು, ಮಾ 24 (DaijiworldNews/MS): "ಜೀವನದಲ್ಲಿ ನಾನು ಒಂದು ಬಾರಿ ತಪ್ಪು ಮಾಡಿದ್ದು, ಆ ತಪ್ಪನ್ನು ಈಗಾಗಲೇ ಧೈರ್ಯವಾಗಿ ಒಪ್ಪಿಕೊಂಡಿದ್ದೇನೆ. ಅದರೂ ಸಚಿವರಾಗಿ ಸುಧಾಕರ್ ಇಂತಹ ಹೇಳಿಕೆ ಕೊಡಬಾರದಿತ್ತು" ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿಡಿ ಕೇಸ್ ವಿಚಾರವಾಗಿ ಮಾತನಾಡಿದ್ದ ಸಚಿವ ಡಾ. ಕೆ. ಸುಧಾಕರ್ , "ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು, . ಡಿಕೆಶಿ, ಕುಮಾರಸ್ವಾಮಿ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿ" ಎಂದು ಹೇಳಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಚ್.ಡಿ.ಕೆ, "ಇಲ್ಲಿ ಯಾರು ಸತ್ಯ ಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಅವರು ಇಲ್ಲಿ ಯಾಕೆ ತಂದರು? ನಾನು ಮಾಡಿದ ತಪ್ಪನ್ನು ಧೈರ್ಯವಾಗಿ ಒಪ್ಪಿಕೊಂಡಿದ್ದೇನೆ. ಇದೇ ವಿಚಾರವನ್ನು ಸದನದಲ್ಲೂ ತಿಳಿಸಿದ್ದೇನೆ. ನಾನು ಒಂದು ಬಾರಿ ಜೀವನದಲ್ಲಿ ತಪ್ಪು ಮಾಡಿದ್ದೇನೆ. ಇಲ್ಲಿ ಎಲ್ಲರ ಮನೆಯ ದೋಸೆಯೂ ತೂತೆ. ಇದೆಲ್ಲದನ್ನು ಬಿಟ್ಟು ರಾಜ್ಯದ ಜನರ ಮೇಲೆ ನಮ್ಮ ದೃಷ್ಟಿ ಇರಲಿ , ಇಲ್ಲಿ ನನ್ನ ಹೆಸರು ಯಾಕೆ ಪ್ರಸ್ತಾಪಿಸಿದರೂ ಗೊತ್ತಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.