ನವದೆಹಲಿ, ಮಾ.24 (DaijiworldNews/MB) : ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ದರ ಲೀಟರ್ಗೆ 18 ಪೈಸೆ ಮತ್ತು ಡೀಸೆಲ್ ದರ ಲೀಟರ್ಗೆ 17 ಪೈಸೆ ಇಳಿಕೆಯಾಗಿದೆ.
ಈ ಹಿಂದೆ ಮಾರ್ಚ್ 16, 2020ರಲ್ಲಿ ಇಂಧನ ದರವು ಇಳಿಕೆಯಾಗಿತ್ತು. ಆ ಬಳಿಕ ದರವು ನಿರಂತರವಾಗಿ ಏರಿಕೆಯಾಗಿದ್ದು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿತ್ತು. ಈ ಹಿನ್ನೆಲೆ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿತ್ತು.
ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಬುಧವಾರ ಕೊಂಚ ಕಡಿಮೆಯಾಗಿದೆ. ಆದರೆ ಸ್ಥಳೀಯ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್) ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಈ ದರವು ಬದಲಾಗುತ್ತದೆ.
ದೆಹಲಿಯಲ್ಲಿ ಈ ಹಿಂದೆ 91.17 ರೂ. ಇದ್ದ ಪೆಟ್ರೋಲ್ ದರವು 18 ಪೈಸೆ ಇಳಿಕೆಯೊಂದಿಗೆ 90.99 ರೂ. ಆಗಿದೆ. 81.47 ರೂ. ಇದ್ದ ಡಿಸೇಲ್ ಬೆಲೆಯು 17 ಪೈಸೆ ಇಳಿಕೆಯೊಂದಿಗೆ 81.30 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ದರವು ಲೀಟರ್ಗೆ 97.40 ಹಾಗೂ ಡೀಸೆಲ್ಗೆ 88.42 ಇದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 94.04 ರೂ. ಹಾಗೂ ಡೀಸೆಲ್ ದರ ಲೀಟರ್ಗೆ 86.37 ರೂ. ಆಗಿದೆ.