ಬೆಂಗಳೂರು, ಮಾ.24 (DaijiworldNews/MB) : ''ಬೇರೆಯವರೇನು ಏಕಪತ್ನಿ ವ್ರತಸ್ಥರಾ?. ಎಲ್ಲ ಸಚಿವರು, ಶಾಸಕರ ತನಿಖೆಯಾಗಲಿ, ಯಾರಲ್ಲ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಬಯಲಾಗಲಿದೆ'' ಎಂದು ಮಂಗಳವಾರ ಹೇಳಿದ್ದ ಆರೋಗ್ಯ ಸಚಿವ ಕೆ. ಸುಧಾಕರ್ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ''ತಾವು ಏಕಪತ್ನಿವ್ರತಸ್ಥರಾಗಿದ್ರೆ ತಡೆಯಾಜ್ಞೆ ತಂದಿದ್ದೇಕೆ'' ಎಂದು ಪ್ರಶ್ನಿಸಿದೆ.
''ಈವರೆಗೆ ಮುಖ್ಯಮಂತ್ರಿಯಾದವರಿಂದ ಹಿಡಿದು ಸಚಿವರು, ಶಾಸಕರು ಎಲ್ಲರೂ ಜೀವನದಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಸಿಲ್ಲವೆಂದು ಸಾಬೀತು ಪಡಿಸಲಿ. ಯಾರು ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ ಎಂದು ತನಿಖೆಯಾಗಲಿ. ವಿಧಾನಸಭೆಯಲ್ಲಿರುವ 225 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆ ಮಾಡಿಸಲಿ. ಯಾರು ಏನು ಮಾಡಿದರೆ ಗೊತ್ತಾಗಲಿ. ಬೇರೆಯವರೇನು ಏಕಪತ್ನಿ ವ್ರತಸ್ಥರಾ?'' ಎಂದು ಪ್ರಶ್ನಿಸಿದ್ದರು.
ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಕಾಂಗ್ರೆಸ್, ''ಸುಧಾಕರ್ ಅವರೇ. ತಾವು ಏಕಪತ್ನಿ ವ್ರತಸ್ಥರಾಗಿದ್ದೀರಾ? ಹಾಗಿದ್ದರೆ ಕೋರ್ಟಿಗೆ ಹೋಗಿ ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ಏಕೆ ತಂದಿದ್ದೀರಿ? ಎಂದು ಪ್ರಶ್ನಿಸಿದ್ದು ಅದರ ತನಿಖೆಗೂ ಒಂದು ಎಸ್ಐಟಿ ತಂಡ ರಚಿಸಿಬಿಡಿ ಸ್ವಾಮಿ'' ಎಂದು ಸುಧಾಕರ್ ಕಾಲೆಳೆದಿದೆ.
''ಬೇರೆಯವರೇನು ಏಕಪತ್ನಿ ವ್ರತಸ್ಥರಾ?'' ಎಂಬ ಸುಧಾಕರ್ ಹೇಳಿಕೆ, ''ಎಲ್ಲರೂ ಶ್ರೀರಾಮಚಂದ್ರರಲ್ಲ'' ಎಂಬ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆಯನ್ನು ಉಲ್ಲೇಖ ಮಾಡಿರುವ ಕಾಂಗ್ರೆಸ್, ''ಈ ಸಮರ್ಥನೆಗಳ ಮೂಲಕ ಬಿಜೆಪಿಗರು ತಾವು ಕಂಡವರ ಮನೆಯ ಹೆಣ್ಣುಮಕ್ಕಳನ್ನ ಮಂಚಕ್ಕೆ ಕರೆದು ಅತ್ಯಾಚಾರ ಮಾಡುವವರು ಎನ್ನುವುದನ್ನ ಒಪ್ಪಿಕೊಂಡಿದ್ದಾರೆ. ಬಿಜೆಪಿ ಬ್ಲ್ಯೂ ಬಾಯ್ಸ್ ಬಂಡತನದ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ'' ಎಂದು ಟೀಕಿಸಿದೆ.