ಬೆಂಗಳೂರು, ಮಾ.24 (DaijiworldNews/MB) : ''ಕಾಂಗ್ರೆಸ್ ಎಂದರೆ ಸಿಡಿ ತಯಾರಿಸುವ ಗ್ಯಾಂಗ್, ಅದಕ್ಕೆ ರಾಜ್ಯದ ಜನರು ಸರಿಯಾದ ಪಾಠ ಕಲಿಸ್ತಾರೆ'' ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನೀವು ಯಾವ ಪುರುಷಾರ್ಥಕ್ಕೆ ಈ ಸಿಡಿ ವಿಚಾರ ಹಿಡಿದು ಅಹೋರಾತ್ರಿ ಧರಣಿ ಮಾಡುತ್ತೀರಿ?, ಆಗ ಮೇಟಿ ಅವರ ಹಗರಣ ಇರಲಿಲ್ಲವೇ'' ಎಂದು 2016 ರ ಕಾಂಗ್ರೆಸ್ ನಾಯಕ ಎಚ್. ವೈ. ಮೇಟಿ ಅವರ ಮೇಲಿನ ಲೈಂಗಿಕ ಆರೋಪದ ಬಗ್ಗೆ ಕೆದಕಿ ಕಾಂಗ್ರೆಸ್ ಕಾಲೆಳೆದಿದ್ದಾರೆ.
''ನಾವು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತೇವೆ. ಅಷ್ಟಕ್ಕೂ ಈ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾಗಿರುವ ಸಿಡಿಯಲ್ಲಿರುವ ಯುವತಿ ಆಕೆಯಾಗಿಯೇ ದೂರು ನೀಡಿಲ್ಲ. ಬದಲಾಗಿ ಸ್ಥಳ ಬದಲಾವಣೆ ಮಾಡುತ್ತಿದ್ದಾಳೆ'' ಎಂದು ದೂರಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಮುಂದಿಟ್ಟು ಕಾಂಗ್ರೆಸ್ ಮಂಗಳವಾರದ ವಿಧಾನಸಭೆ ಕಲಾಪದ ವೇಳೆ ಪ್ರತಿಭಟನೆ ನಡೆಸಿದ್ದು ಸರ್ಕಾರದ ವಿರುದ್ದ ಕೈಯಲ್ಲಿ ಸಿಡಿ ಹಿಡಿದು, ಸಿಡಿ ಸರ್ಕಾರ, ಸಿಡಿ ಸಿಡಿ ಎಂಬ ಘೋಷಣೆ ಕೂಗಿದ್ದರು.