ತಿರುವನಂತಪುರಂ, ಮಾ.24 (DaijiworldNews/MB) : ''ಕೇರಳದ ಸಾಕ್ಷರತಾ ಪ್ರಮಾಣ ಶೇ.90 ಆಗಿದೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿ ಬೆಳೆದಿಲ್ಲ ಎಂದು ಕೇರಳದಲ್ಲಿರುವ ಬಿಜೆಪಿ ಒಬ್ಬರೇ ಶಾಸಕರಾದ ಒ ರಾಜಗೋಪಾಲ್ ಅವರು ಹೇಳಿದ್ದಾರೆ. ಕೇರಳದಲ್ಲಿ ಪಕ್ಷ ವೇಗವಾಗಿ ಬೆಳೆಯದಿರಲು ರಾಜ್ಯದ ಶಿಕ್ಷಣ ಮಟ್ಟವೇ ಕಾರಣ'' ಎಂದು ರಾಜಗೋಪಾಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಕೇರಳ ಬೇರೆಯೇ ರೀತಿಯ ರಾಜ್ಯ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳದ ಸಾಕ್ಷರತೆಯ ಪ್ರಮಾಣ 90 ಪ್ರತಿಶತದಷ್ಟಿದೆ. ಅವರು ಯೋಚಿಸುತ್ತಾರೆ, ಮಾತುಕತೆ ನಡೆಸುತ್ತಾರೆ. ವಿದ್ಯಾವಂತರ ಅಭ್ಯಾಸವೇ ಇದಾಗಿದೆ. ಅದು ಕೂಡಾ ಬಿಜೆಪಿಗೆ ಒಂದು ಸಮಸ್ಯೆಯಾಗಿ ಮಾರ್ಪಟ್ಟಿದೆ'' ಎಂಬ ಹೇಳಿಕೆಯನ್ನು ಕೂಡಾ ನೀಡಿದ್ದಾರೆ.
"ಎರಡನೇ ವಿಶೇಷವೆಂದರೆ ರಾಜ್ಯದಲ್ಲಿ 55 ಪ್ರತಿಶತ ಹಿಂದೂಗಳು ಮತ್ತು 45 ಪ್ರತಿಶತ ಅಲ್ಪಸಂಖ್ಯಾತರು ಇದ್ದಾರೆ. ಆದ್ದರಿಂದ, ಎಲ್ಲಾ ರೀತಿಯಲ್ಲೂ ವ್ಯತ್ಯಾಸವಿರುತ್ತದೆ. ಆದ್ದರಿಂದ ಕೇರಳವನ್ನು ಬೇರೆ ಯಾವುದೇ ರಾಜ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಆದರೆ ನಮ್ಮ ಪಕ್ಷವು ನಿಧಾನವಾಗಿ ಇಲ್ಲಿ ಬೆಳೆಯುತ್ತದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.