ಪಾಟ್ನಾ, ಮಾ. 24 (DaijiworldNews/HR): ಬಿಹಾರ ವಿಧಾನಸಭೆಯಲ್ಲಿ ಪೊಲೀಸ್ ಮಸೂದೆ ವಿಚಾರವಾಗಿ ಗದ್ದಲ ನಡೆದಿದ್ದು, ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಪಕ್ಷ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿತ್ತು.
ಆರ್ಜೆಡಿ ಶಾಸಕರು ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಕೊಠಡಿಯಿಂದ ಹೊರ ಹೋಗದಂತೆ ತಡೆಯಲು ಯತ್ನಿಸಿದ್ದು, ಇದನ್ನು ಗಮನಿಸಿ ಮಾರ್ಷಲ್ಗಳು ಅವರನ್ನು ತಡೆಯಲು ಮುಂದಾಗಿದ್ದು, ಆಗ ಆರ್ಜೆಡಿ ಮಹಿಳಾ ಶಾಸಕಿಯೊಬ್ಬರು ತಮ್ಮ ಪ್ರತಿರೋಧವನ್ನು ಮತ್ತಷ್ಟು ತೀವ್ರಗೊಳಿಸಿ ವಿಧಾನಸಭೆ ಆವರಣದ ಬಾಗಿಲಿನಲ್ಲಿ ಮಲಗಿ ನಾಟಕ ಸೃಷ್ಟಿಸಿದ್ದು, ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎನ್ನಲಾಗಿದೆ.
ಇನ್ನು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಆರ್ಜೆಡಿ ಶಾಸಕ ತೇಜಸ್ವಿ ಯಾದವ್ ಪೊಲೀಸ್ ಬಿಲ್ಗೆ ನಮ್ಮ ವಿರೋಧವಿದೆ, ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಲು ವಿಪಕ್ಷಗಳು ತೀರ್ಮಾನ ತೆಗೆದುಕೊಂಡಿವೆ ಎಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ಶಾಸಕ ಸತ್ಯೇಂದ್ರ ಕುಮಾರ್, ವಿರೋಧ ಪಕ್ಷಗಳು ಬಿಹಾರ್ ಸ್ಪೆಷಲ್ ಆರ್ಮ್ಡ್ ಪೊಲೀಸ್ ಬಿಲ್ 2021 ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವು ಎಂದು ಆರೋಪಿಸಿದ್ದಾರೆ.