ಶೃಂಗೇರಿ, ಮಾ.24 (DaijiworldNews/MB) : ಅಪ್ರಾಪ್ತ ಬಾಲಕಿ ಮೇಲೆ 30ಕ್ಕೂ ಹೆಚ್ಚು ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿ ಪ್ರಮುಖ ಆರೋಪಿಯ ಬಗ್ಗೆ ತಿಳಿದು ಬಂದಿದೆ. ಈ ಆರೋಪಿ ಆ ಅಪ್ರಾಪ್ತ ಬಾಲಕಿಯ ತಾಯಿಯೇ ಆಗಿದ್ದಾಳೆ ಎಂದು ವರದಿಯಾಗಿದೆ.
2021 ಜನವರಿ 30ರಂದು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು. ಅದೇ ದಿನ ಈ ಬಗ್ಗೆ ಪೊಲೀಸರು ಎಫ್ಐಆರ್ ಕೂಡಾ ದಾಖಲು ಮಾಡಿದ್ದರು. 2020 ಸೆಪ್ಟಂಬರ್ 1ರಿಂದ 2021 ಜನವರಿ 27ರವರೆಗೆ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು 15 ವರ್ಷದ ಬಾಲಕಿ ದೂರಿನಲ್ಲಿ ತಿಳಿಸಿದ್ದಳು. ಈ ದೂರಿನ ಆಧಾರದಲ್ಲಿ ಪೊಲೀಸರು ಈಗಾಗಲೇ 32 ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದ ತನಿಖೆ ಸಂದರ್ಭ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಲು ತಾಯಿ ಅವಕಾಶ ನೀಡಿದ್ದಾಳೆ. ಇಷ್ಟರವರೆಗೆ ತಾನು ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಆ ಮಹಿಳೆ ಆ ಬಾಲಕಿಯ ನಿಜವಾದ ತಾಯಿಯಾಗಿದ್ದಾಳೆ.
ಈ ಮಹಿಳೆಗೆ ಉತ್ತರ ಕರ್ನಾಟಕ ಜಿಲ್ಲೆಯೊಂದರಲ್ಲಿ ಮದುವೆ ಆಗಿದ್ದು ಮಗು ಜನಿಸಿದ್ದಳು. ಬಳಿಕ ಶೃಂಗೇರಿ ತಾಲೂಕಿನ ವ್ಯಕ್ತಿಯೊಬ್ಬರೊಂದಿಗೆ ವಿವಾಹವಾಗಿತ್ತು. ವಿವಾಹವಾದ ಕೆಲ ದಿನಗಳ ಬಳಿಕ ಆಕೆ ತನ್ನ ಮಗಳನ್ನು ಶೃಂಗೇರಿಗೆ ಕರೆಸಿಕೊಂಡು ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡಿದ್ದಳು ಎಂದು ವರದಿಯಾಗಿದೆ.
ಬಳಿಕ ಎರಡನೇ ಪತಿಯಿಂದಲೂ ಈ ಮಹಿಳೆ ದೂರವಾಗಿದ್ದು ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ ಮಗಳನ್ನು ಅನೈತಿಕ ಚಟುವಟಿಕೆಗೆ ಎಳೆದು ಆಕೆಯ ಮೇಲೆ ನಿರಂತರ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳೆ ಎಂದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ವರದಿಯಾಗಿದೆ.