ಬೆಂಗಳೂರು, ಮಾ.24 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸಿಡಿಯಲ್ಲಿರುವ ಯುವತಿಯ ಪೋಷಕರ ಹೇಳಿಕೆಯನ್ನು ಎಸ್ಐಟಿ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಎಸ್ಐಟಿ ಮುಂದೆ ಯುವತಿಯ ಪೋಷಕರು, ''ನಮ್ಮ ಮಗಳಿಂದ ಬಲವಂತವಾಗಿ ವೀಡೀಯೋ ಮಾಡಿಸಲಾಗಿದೆ. ಆಕೆ ಈಗ ಅಪಾಯದಲ್ಲಿದ್ದಾಳೆ. ಆದರೆ ಆಕೆ ಎಲ್ಲಿದ್ದಾಳೆ ಎಂದು ನಮಗೂ ತಿಳಿದಿಲ್ಲ. ಮಾರ್ಚ್ 5ರಿಂದ ನಮಗೆ ನಮ್ಮ ಮಗಳ ಸಂಪರ್ಕವೇ ಇಲ್ಲ. ಆಕೆ ಅಪಾಯದಲ್ಲಿರುವುದಂತೂ ಖಂಡಿತ, ಆಕೆಯನ್ನು ದಯವಿಟ್ಟು ಪತ್ತೆ ಹಚ್ಚಿ'' ಎಂದು ಕೇಳಿಕೊಂಡಿದ್ದಾರೆ.
ಇನ್ನು ಈ ಸಿಡಿ ಬಿಡುಗಡೆಯಾದ ಕೆಲ ದಿನಗಳ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಆ ನಂತರ ಈ ಬಗ್ಗೆ ವೀಡಿಯೋ ಮಾಡಿದ್ದ ಯುವತಿ, ನನ್ನ ಜೀವ ಅಪಾಯದಲ್ಲಿದೆ. ಈ ವೀಡೀಯೋವನ್ನು ರಮೇಶ್ ಅವರೇ ಬಿಡುಗಡೆ ಮಾಡಿದ್ದು, ಅವರು ಕೆಲಸ ಕೊಡಿಸುವ ಭರವಸೆ ನೀಡಿದ್ದರು ಎಂದು ಹೇಳಿದ್ದಾಳೆ. ಆದರೆ ಆ ಬಳಿಕ ಆಕೆ ನಾಪತ್ತೆಯಾಗಿದ್ದಾಳೆ. ಆಕೆಯ ತಂದೆ ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನವೇ ಎಸ್ಐಟಿ ಅಧಿಕಾರಿಗಳು ಆಕೆಗೆ ನೊಟೀಸ್ ಜಾರಿ ಮಾಡಿದ್ದಾರೆ. ಆದರೆ ಆಕೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆ ಯುವತಿಗೆ ಈಗಾಗಲೇ ಐದು ಬಾರಿ ವಾಟ್ಸಪ್, ಇಮೇಲ್ ಮೂಲಕ ನೊಟೀಸ್ ನೀಡಲಾಗಿದೆ. ಆದರೆ ಈ ನೊಟೀಸ್ಗೆ ಯುವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
ಇನ್ನು ಉಳಿದ ಆರೋಪಿಗಳೂ ವಿಚಾರಣೆಗೆ ಹಾಜರಾಗಿಲ್ಲ. ಅಲ್ಲದೆ ಅವರು ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ, ಇದರಿಂದಾಗಿ ಅವರನ್ನು ಟ್ರೇಸ್ ಮಾಡುವುದು ಕಷ್ಟವಾಗಿದೆ ಎಂದು ಹೇಳಲಾಗಿದೆ.