ಚಿಕ್ಕಬಳ್ಳಾಪುರ, ಮಾ.23 (DaijiworldNews/PY): "ಕೇಂದ್ರ ಆರೋಗ್ಯ ಸಚಿವರು ಹಾಗೂ ಇಲಾಖೆ ಕಾರ್ಯದರ್ಶಿ ಜೊತೆ ಕೊರೊನಾ ಲಸಿಕೆ ಕೊರತೆಯ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದು, ಮುಂದಿನ ವಾರದಲ್ಲಿ 12.05 ಲಕ್ಷ ಡೋಸ್ ಲಸಿಕೆ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಗುಡಿಬಂಡೆ ತಾಲ್ಲೂಕು ಆವುಲನಾಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾರ್ಚ್ 24ರ ಬುಧವಾರದಂದು ಕೇಂದ್ರ ಆರೋಗ್ಯ ಇಲಾಖೆ ತುರ್ತಾಗಿ 4 ಲಕ್ಷ ಡೋಸ್ ಲಸಿಕೆಯನ್ನು ವಿಮಾನದ ಮುಖೇನ ಕಳುಹಿಸುತ್ತಿದೆ. ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವರೇ ಭರವಸೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ಕೊರೊನಾ ಕಳೆದೆರಡು ದಿನಗಳಿಂದ ಇಳಿಕೆಯಾಗಿದೆ. ಆದರೆ, ಕೊರೊನಾದ ಎರಡನೇ ಅಲೆ ಇದೆ ಎಂದು ಜನರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಎರಡು ತಿಂಗಳ ಕಾಲ ರಾಜಕೀಯ ಹಾಗೂ ಧಾರ್ಮಿಕ ಸಮಾರಂಭಗಳನ್ನು ಮುಂದೂಡಬೇಕು ಎಂದು ಮನವಿ ಮಾಡುತ್ತೇವೆ" ಎಂದಿದ್ದಾರೆ.