ನವದೆಹಲಿ, ಮಾ.23 (DaijiworldNews/PY): 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಎಪ್ರಿಲ್ 1ರಿಂದ ಕೊರೊನಾ ಲಸಿಕೆ ನೀಡಲು ಕೇಂದ್ರ ತೀರ್ಮಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, "ಕೊರೊನಾ ವೈರಸ್ ಟಾಸ್ಕ್ ಪೋಸ್ಟ್ ಹಾಗೂ ತಜ್ಞರ ಮೇರೆಗೆ ಕ್ಯಾಬಿನೆಟ್ನಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ಸಾಕಷ್ಟು ಲಸಿಕೆ ಲಭ್ಯವಿದೆ" ಎಂದು ಹೇಳಿದ್ದಾರೆ.
"ಎಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ. ಕೋವಿನ್ ಆ್ಯಪ್ನಲ್ಲಿ ರಿಜಿಸ್ಟರ್ ಮಾಡಿಕೊಂಡು ಎಪ್ರಿಲ್ 1ರಿಂದ ಲಸಿಕೆ ಪಡೆದುಕೊಳ್ಳಬಹುದು" ಎಂದು ತಿಳಿಸಿದ್ದಾರೆ.
"ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡಲು ಅವಕಾಶ ನೀಡಲಾಗಿದೆ" ಎಂದಿದ್ದಾರೆ.
ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಜನವರಿ 16ರಿಂದ ಪ್ರಾರಂಭವಾಗಿದ್ದು, ಆರೋಗ್ಯ ಸಿಬ್ಬಂದಿಗಳ ನಂತರ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗಿತ್ತು.