ಬೆಂಗಳೂರು, ಮಾ.23 (DaijiworldNews/MB) : ಉದ್ಯೋಗ ಕೇಳಿದವರಿಗೆ ನರೇಂದ್ರ ಮೋದಿ "ಪಕೋಡಾ ಮಾರಿ" ಎನ್ನುತ್ತಾರೆ. ರಾಜ್ಯದ ಸಚಿವರು "ಮಂಚ ಹತ್ತಿ" ಎನ್ನುತ್ತಾರೆ ಎಂದು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಗೆಗಿನ ಚರ್ಚೆ ಸದನದಲ್ಲಿಯೂ ಭಾರೀ ಜೋರಾಗಿಯೇ ನಡೆದಿದೆ. ಕಾಂಗ್ರೆಸ್ ಸಿಡಿ ಕೇಸ್ ತನಿಖೆಗೆ ಆಗ್ರಹಿಸಿ ಸಿ.ಡಿ ಪ್ರದರ್ಶನ ಮಾಡಿ ಕಲಾಪಕ್ಕೆ ಅಡ್ಡಿಪಡಿಸಿತ್ತು. ಟ್ವೀಟ್ ಮೂಲಕವೂ ಬಿಜೆಪಿ ಸರ್ಕಾರ ಹಾಗೂ ರಮೇಶ್ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್, ''ಸಂತ್ರಸ್ತೆಯ ಆರೋಪ ಹಾಗೂ ಸತ್ಯಾಂಶವನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸುತ್ತಿರುವುದೇಕೆ? ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಸಾಧ್ಯ'' ಎಂದು ಹೇಳಿದೆ.
''ಹೆಣ್ಣಿನ ಅಸಹಾಯಕತೆ, ಬಡತನವನ್ನು ಆಮಿಷ ಒಡ್ಡಿ ದೈಹಿಕವಾಗಿ ಉಪಯೋಗಿಸಿಕೊಳ್ಳುವುದು ಅತ್ಯಾಚಾರವಾಗುತ್ತದೆ. ರೇಪಿಸ್ಟ್ ರಮೇಶ್ ಕೂಡ ಮಾಡಿದ್ದು ಅದನ್ನೇ. ಬಸವರಾಜು ಬೊಮ್ಮಾಯಿ ಅವರೇ, ಕಾನೂನಿನ ಪರಿಜ್ಞಾನವಿದೆಯೇ ತಮಗೆ? ಅಥವಾ ರಾಜ್ಯದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ಬದಲಾಗಿದೆಯೇ?'' ಎಂದು ಪ್ರಶ್ನಿಸಿರುವ ಕಾಂಗ್ರೆಸ್, ''ಬಿಜೆಪಿಯು ಸ್ತ್ರೀಸಂಕುಲಕ್ಕೆ ಅಪಮಾನವೆಸಗುತ್ತಿದೆ'' ಎಂದು ದೂರಿದೆ.
''ಕರ್ನಾಟಕದ ಬಿಜೆಪಿ ಸರ್ಕಾರ ರೇಪ್ರಮೇಶ್ ಅವರನ್ನು ರಕ್ಷಿಸಲು 'ಯುಪಿ ಮಾಡೆಲ್' ಅನುಸರಿಸುತ್ತಿದೆ. ವಿದ್ಯಾರ್ಥಿನಿಗೆ ಅತ್ಯಾಚಾರವೆಸಗಿದ ಆರೋಪಿ ಬಿಜೆಪಿ ಸಂಸದ ಸ್ವಾಮಿ ಚಿನ್ಮಯಾನಂದನನ್ನು ರಕ್ಷಿಸಲು ಸಂತ್ರಸ್ತೆಯ ವಿರುದ್ಧವೇ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗಿತ್ತು. ರಾಜ್ಯದಲ್ಲೂ ಅದೇ ಮಾದರಿಯಲ್ಲಿ ಅತ್ಯಾಚಾರಿಯ ರಕ್ಷಣೆ ನಡೆಯುತ್ತಿದೆ'' ಎಂದು ದೂರಿದೆ.