ಬೆಂಗಳೂರು, ಮಾ.23 (DaijiworldNews/PY): "ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಅವರ ವಿರುದ್ದ ಎಫ್ಐಆರ್ ದಾಖಲಿಸಬೇಕು. ಕೋರ್ಟ್ಗೆ ಹೋಗಿರುವ ಆರು ಸಚಿವರು ರಾಜೀನಾಮೆ ನೀಡಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಬೇಡಿಕೆಯ ಬಗ್ಗೆ ಸದನದಲ್ಲಿ ಹೋರಾಟ ಮುಂದುವರೆಯುತ್ತದೆ" ಎಂದಿದ್ದಾರೆ.
"ಸಂತ್ರಸ್ತೆಯ ಹೇಳಿಯನ್ನು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ದ ಎಫ್ಐಆರ್ ದಾಖಲಿಸಬೇಕು. ಪ್ರಕರಣವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಿಡುಗಡೆಯಾಗುತ್ತಿದ್ದಂತೆ ತಮ್ಮ ವಿರುದ್ದ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು ಆರು ಸಚಿವರು ಕೋರ್ಟ್ನ ಮೊರೆ ಹೋಗಿದ್ದರು. ಸಚಿವರಾದ ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.