ಹೈದರಾಬಾದ್, ಮಾ.23 (DaijiworldNews/MB) : ಈ ಹಿಂದೆ ಕೊರೊನಾ ಲಸಿಕೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಓವೈಸಿ ಅವರು ಹೈದರಾಬಾದ್ನ ಕಂಚನ್ಬಾಗ್ ಆಸ್ಪತ್ರೆಯಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಇಂದು ಮೊದಲ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡೆ. ಈ ವ್ಯಾಕ್ಸಿನೇಷನ್ ಕೊರೊನಾದಿಂದ ನನ್ನನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಎಲ್ಲರಿಗೂ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಗನೆ ಲಸಿಕೆ ಪಡೆಯಲು ಅರ್ಹರಾದ ಪ್ರತಿಯೊಬ್ಬರು ಲಸಿಕೆ ಪಡೆಯಿರಿ ಎಂದು ನಾನು ಕೋರುತ್ತೇನೆ. ಅಲ್ಲಾಹನು ಸಾಂಕ್ರಾಮಿಕ ರೋಗದಿಂದ ನಮ್ಮನ್ನು ರಕ್ಷಿಸಲಿ'' ಎಂದು ಹೇಳಿದ್ದಾರೆ.
ಮಾರ್ಚ್ 1 ರಂದು ಪ್ರಧಾನಿ ನರೇಂದ್ರ ಮೋದಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಪಡೆದಿದ್ದ ವೇಳೆ ಟೀಕೆ ಮಾಡಿದ್ದ ಓವೈಸಿ ಅವರು, ಪ್ರಧಾನಿಯವರು ಕಾಕತಾಳೀಯವಾಗಿ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯ ಬಗ್ಗೆ ಕೆಲವು ದೇಶಗಳು ಶಂಕೆ ವ್ಯಕ್ತಪಡಿಸಿವೆ. ಇದರ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದರು.