ನವದೆಹಲಿ, ಮಾ.23 (DaijiworldNews/MB) : ಭಾರತೀಯ ಸಂಸತ್ತಿನಲ್ಲಿ ಚರ್ಚೆ ನಡೆದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರಿಗೆ ಬೆದರಿಕೆ ಹಾಕಲಾದ ವಿಚಾರದ ಬಗ್ಗೆ ಯುಕೆ ಪೊಲೀಸರು ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುಕ್ತ ತನಿಖೆ ಆರಂಭಿಸಿದೆ.
ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ (ಎಸ್ಯು) ಅಧ್ಯಕ್ಷರಾಗಿ ಇತ್ತೀಚೆಗೆಷ್ಟೇ ಆಯ್ಕೆಯಾದ ಮಣಿಪಾಲ ಮೂಲದ ರಶ್ಮಿ ಸಾಮಂತ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಕಳೆದ ವಾರ ಬಿಜೆಪಿ ಸದಸ್ಯೆ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಆರೋಪಿಸಿದ್ದರು.
ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ (ಎಸ್ಯು) ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಆಗಿದ್ದ ರಶ್ಮಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಪೋಸ್ಟ್ ಮಾಡಿದ್ದ ಜನಾಂಗೀಯ ಮತ್ತು ಸಂವೇದನಾರಹಿತವಾದ ಹೇಳಿಕೆಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಆನ್ಲೈನ್ ಬೆದರಿಕೆಗಳೂ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ತಮ್ಮ ತವರೂರಾದ ಉಡುಪಿಗೆ ಹಿಂದಿರುಗಿದ್ದರು. ಅಲ್ಲಿ ಅವರು ಮೂರು ದಿನಗಳ ಕಾಲ ಒತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ರಶ್ಮಿ ಭಾರತದಲ್ಲಿ ಇದ್ದ ಸಂದರ್ಭ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ಸಂಶೋಧಕ ಡಾ. ಅಭಿಜಿತ್ ಸರ್ಕಾರ್ ಅವರು ರಶ್ಮಿ ಪೋಷಕರು ಹಿಂದೂಗಳೆಂದು ಸೂಚಿಸುವ ಫೋಟೋವನ್ನು ಹಾಕಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು. ಆಕೆ ಕರ್ನಾಟಕದಿಂದ ಆಕ್ಸ್ಫರ್ಡ್ಗೆ ಬಂದಿದ್ದಾಳೆ, ಅದು ಒಂದು ಇಸ್ಲಾಮಾಫೋಬಿಕ್ ಬಲಪಂಥೀಯ ಪಡೆಗಳ ಭದ್ರಕೋಟೆ. ಬಲಪಂಥೀಯ ದೇಸಿ ಪಡೆಗಳಿಗಾಗಿ ಸನಾತನ ಹಿಂದುತ್ವ ಸಂಸ್ಕೃತಿಯನ್ನು ಪುನಃ ಸ್ಥಾಪಿಸಲೆಂದು. ಆಕ್ಸ್ಫರ್ಡ್ ವಿದ್ಯಾರ್ಥಿಗಳು ಇನ್ನೂ 'ಸನಾತಾನಿ' ಅಧ್ಯಕ್ಷರಿಗೆ ಸಿದ್ಧವಾಗಿಲ್ಲ ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆ ಧಾರ್ಮಿಕ ದ್ವೇಷ, ಬೆದರಿಕೆ ಹಾಗೂ ಕಿರುಕುಳಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಜಾಗತಿಕ ಹಿಂದೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬ್ರಿಟಿಷ್ ಇಂಡಿಯನ್ ಆದ ಸತೀಶ್ ಶರ್ಮಾ ಅವರು ಸರ್ಕಾರ್ ವಿರುದ್ದ ಸಮಾಂತ್ ಪರವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ದ್ವೇಷದ ಘಟನೆಯ ತನಿಖೆ ನಡೆಸಲಾಗುತ್ತಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸರು ಖಚಿತಪಡಿಸಿದ್ದಾರೆ. ಸರ್ಕಾರ್ ವಿರುದ್ದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಾಮಂತ್ ಅವರು ದೂರನ್ನು ದಾಖಲಿಸಿಕೊಂಡಿದ್ದಾರೆ.
ಏತನ್ಮಧ್ಯೆ ಆಕ್ಸ್ಫರ್ಡ್ ಇಂಡಿಯಾ ಸೊಸೈಟಿ, ಆಕ್ಸ್ಫರ್ಡ್ ಹಿಂದೂ ಸೊಸೈಟಿ ಮತ್ತು ಆಕ್ಸ್ಫರ್ಡ್ ಸೌತ್ ಏಷ್ಯನ್ ಸೊಸೈಟಿ ಸೋಮವಾರ ಹೇಳಿಕೆ ನೀಡಿದೆ. ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ (ಎಸ್ಯು) ಅಧ್ಯಕ್ಷರಾಗಿದ್ದ ರಶ್ಮಿ ಸಾಮಂತ್ ಅವರ ರಾಜೀನಾಮೆಗೂ ಅವರು ಭಾರತೀಯ ಅಥವಾ ಹಿಂದೂ ಎಂಬ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಜನಾಂಗ, ಧರ್ಮ, ರಾಷ್ಟ್ರೀಯ ಮೂಲ, ಜಾತಿ, ಲಿಂಗ, ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿಸುವಿಕೆಯ ಆಧಾರದ ಮೇಲಿನ ಎಲ್ಲಾ ರೀತಿಯ ತಾರತಮ್ಯಗಳನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ. ವರ್ಣಭೇದ ನೀತಿಯ ಸಂಸ್ಕೃತಿ ವಿಶ್ವವಿದ್ಯಾನಿಲಯದಲ್ಲಿ ಚಾಲ್ತಿಯಲ್ಲಿದೆ ಎಂದು ನಾವು ಗುರುತಿಸುತ್ತೇವೆ. ಕಂದು ಮೈ ಬಣ್ಣದ ವಿದ್ಯಾರ್ಥಿಗಳು ಸೇರಿದಂತೆ ವಿಶ್ವವಿದ್ಯಾಲಯದ ಹಲವಾರು ಸದಸ್ಯರಿಗೆ ವರ್ಣಭೇದ ನೀತಿಯು ಜೀವಂತ ವಾಸ್ತವವಾಗಿದೆ. ಆದ್ದರಿಂದ, ಸಾಮಂತ್ ಅವರು ರಾಜೀನಾಮೆ ನೀಡಬೇಕಾಗಿಲ್ಲ. ಅವರ ರಾಷ್ಟ್ರೀಯತೆ ಅಥವಾ ಅವರ ಧರ್ಮ ರಾಜೀನಾಮೆಗೆ ಕಾರಣವಾಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.