ಚೆನ್ನೈ, ಮಾ.23 (DaijiworldNews/PY): ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರ ಮನವೊಲಿಸುವ ಉದ್ದೇಶದಿಂದ ಏನೇನೋ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ, ಇಲ್ಲೋರ್ವ ಅಭ್ಯರ್ಥಿ ಮತದಾರರ ಬಟ್ಟೆಗಳನ್ನು ತೊಳೆದು ಸುದ್ದಿಯಾಗಿದ್ದಾರೆ.
ತಮಿಳುನಾಡಿನ ನಾಗಪಟ್ಟಿಣಂ ವಿಧಾನಸಭಾ ಕ್ಷೇತ್ರಕ್ಕೆ ಎಐಎಡಿಎಂಕೆ ಪಕ್ಷದಿಂದ ಕಣಕ್ಕಿಳಿದಿರುವ ತಂಗಾ ಕಾತಿವರನ್ ಅವರು ಮತದಾರರ ಮನವೊಲಿಸಲು ಅವರ ಬಟ್ಟೆಗಳನ್ನು ತೊಳೆದು ಕೊಟ್ಟಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ನಾಗೋರೆಗೆ ತೆರಳಿದ್ದ ಸಂದರ್ಭ ಮನೆಯೊಂದಕ್ಕೆ ತೆರಳಿ ಮಹಿಳೆಯಿಂದ ಬಟ್ಟೆಗಳನ್ನು ಕೇಳಿ ಪಡೆದು, ಹತ್ತು ನಿಮಿಷಗಳಲ್ಲಿ ಬಟ್ಟೆ ತೊಳೆದುಕೊಟ್ಟಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಚುನಾವಣೆಯಲ್ಲಿ ಗೆದ್ದರೆ ಮನೆ ಮನೆಗೆ ವಾಷಿಂಗ್ ಮೆಷಿನ್ ನೀಡುತ್ತೇನೆ. ಈ ವಿಚಾರವನ್ನು ಹೇಳಲು ನಾನು ಬಟ್ಟೆಗಳನ್ನು ತೊಳೆದುಕೊಟ್ಟಿದ್ದೇನೆ. ದಿ.ಸಿಎಂ ಜಯಲಲಿತಾ ಅವರು ಮನೆ ಮನೆಗೆ ವಾಷಿಂಗ್ ಮೆಷಿನ್ ನೀಡುವುದಾಗಿ ಭರವಸೆ ನೀಡಿದ್ದರು" ಎಂದಿದ್ದರೆ.
ತಂಗಾ ಕಾತಿರವನ್ ಅವರು ಎಐಎಡಿಎಂಕೆ ಸಕ್ರಿಯ ಕಾರ್ಯಕರ್ತರಾಗಿದ್ದು, ನಾಗಪಟ್ಟಿಣಂ ನಗರಸಭೆಯ ಅಧ್ಯಕ್ಷ ಕೂಡಾ ಆಗಿದ್ದಾರೆ.ಅವರ ಸೇವೆಯನ್ನು ಪರಿಗಣಿಸಿ ಪಕ್ಷ ಇದೇ ಮೊದಲ ಬಾರಿಗೆ ಅವರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದೆ.