ಬೆಂಗಳೂರು, ಮಾ 23(DaijiworldNews/MS): ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಉಪ್ಪಿನಂಶ ಇರುವ ಮರಳು ಬಳಕೆಯಿಂದ ಗುಣಮಟ್ಟ ಹಾಳಾಗುತ್ತದೆ ಎಂಬ ಕಾರಣಕ್ಕೆ ಲವಣಾಂಶದ ಮರಳಿನ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಇತ್ತೀಚೆಗೆ ಮತ್ತೆ ಈ ಮರಳನ್ನು ಬಳಸಲಾಗುತ್ತಿದೆ ಎಂದು ವಿಧಾನ ಪರಿಷತ್ನಲ್ಲಿ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ಭೂ ವಿಜ್ಞಾನ ಇಲಾಖೆ ಸಚಿವರನ್ನು ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ಸಚಿವರು, ನದಿಯ ನೀರು ಸಮುದ್ರಕ್ಕೆ ಸೇರುವ ಕಡೆಗಳಲ್ಲಿ ಮರಳು ದಿಬ್ಬದಿಂದ ಮರಳನ್ನು ಸಂಗ್ರಹಿಸಲಾಗುತ್ತದೆ. ಅದರ ಗುಣಮಟ್ಟ ಪರಿಶೀಲಿಸಿ ಲವಣಾಂಶ ಇಲ್ಲದೆ ಇರುವ ಮರಳನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.
ರಾಜ್ಯದಲ್ಲಿ ಬಡವರು ಹಾಗೂ ಜನಸಾಮಾನ್ಯರು 10 ಲಕ್ಷದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಇತ್ತೀಚೆಗೆ ತಾನೆ ಅಧಿವೇಶನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದರು.