ಬೆಂಗಳೂರು, ಮಾ.23 (DaijiworldNews/PY): "ಕೊರೊನಾ ಕಾರಣದಿಂದ ಪದವಿ ಕೋರ್ಸ್ಗಳ ಆಫ್ಲೈನ್ ತರಗತಿಗಳು ನಿಲ್ಲುವುದಿಲ್ಲ ಹಾಗೂ ನಿಗದಿತ ವೇಳಾಪಟ್ಟಿಯ ಪ್ರಕಾರವೇ ಪರೀಕ್ಷೆಗಳು ಕೂಡಾ ನಡೆಯಲಿವೆ" ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೊರೊನಾ ಎರಡನೇ ಅಲೆ ಹಿನ್ನೆಲೆ ಉನ್ನತ ಶಿಕ್ಷಣ ವಿಭಾಗದ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, "ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ಸರ್ಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ನಡೆಯುತ್ತಿರುವ ಆಫ್ಲೈನ್ ತರಗತಿಗಳು ಮುಂದುವರೆಯಲಿವೆ" ಎಂದು ತಿಳಿಸಿದರು.
"ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳು, ಹಾಸ್ಟೆಲ್ಗಳು ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಹೇಳಿದರು.
"ಪಾಲಿಟೆಕ್ನಿಕ್ಗಳು ಸೇರಿದಂತೆ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕೊರೊನಾ ಎರಡನೇ ಅಲೆ ಬೀರುವ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದು, ಈ ವಿಚಾರದ ಬಗ್ಗೆ ಸಿಎಂ ಅವರೊಂದಿಗೂ ಚರ್ಚಿಸಿದ್ದೇನೆ" ಎಂದು ತಿಳಿಸಿದರು.
"ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಳ ಇಲಾಖೆಯಡಿ ನಡೆಯುತ್ತಿರುವ ಹಾಸ್ಟೆಲ್ಗಳನ್ನು ಮುಂದುವರಿಸುವ ಬಗ್ಗೆ ಆಯಾ ಇಲಾಖೆಗಳನ್ನು ಕೋರಲಾಗುವುದು" ಎಂದರು.