ನವದೆಹಲಿ, ಮಾ.23 (DaijiworldNews/MB) : ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತಾಡಿದಕ್ಕಾಗಿ ನನಗೆ ಮಹಾರಾಷ್ಟ್ರ ಶಿವಸೇನಾ ಸಂಸದ ಅರವಿಂದ ಸಾವಂತ್ ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿರುವ ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ಕೌರ್ ರಾಣಾ ಅವರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ ಕಾರಣಕ್ಕೆ ನನಗೆ ಫೋನ್ ಕರೆ ಹಾಗೂ ಪತ್ರಗಳ ಮೂಲಕ ಆಸಿಡ್ ದಾಳಿ ಬೆದರಿಕೆ ಹಾಕಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ದೂರು ನೀಡಿದ್ದಾರೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಸಿಂಧುದುರ್ಗಾದ ಲೋಕಸಭಾ ಸದಸ್ಯ ಅರವಿಂದ ಸಾವಂತ್, ಯಾವುದೇ ಮಹಿಳೆಗೆ ಈ ರೀತಿ ಬೆದರಿಕೆ ಬಂದಿದ್ದರೆ ನಾನು ಆ ಮಹಿಳೆಯ ಪರವಾಗಿ ನಿಲ್ಲುತ್ತೇನೆ. ಇದು ಸಂಪೂರ್ಣ ಸುಳ್ಳು ಆರೋಪ. ರಾಣಾ ಇಂತಹ ಆರೋಪಗಳಲ್ಲೇ ಕಾಲ ಕಳೆಯುತ್ತಾರೆ. ನಾನು ನನ್ನ ಜೀವನದಲ್ಲೇ ಯಾರಿಗೂ ಬೆದರಿಕೆ ಹಾಕಿದವನಲ್ಲ. ಘಟನೆ ತಿರುಚಿ ಪ್ರಚಾರಗಿಟ್ಟಿಸಿಕೊಳ್ಳುವವರು ಈ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂಸದೆ ನವನೀತ್ ಕೌರ್ ರಾಣಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿರುವ ದೂರಿನಲ್ಲಿ, ಅರವಿಂದ ಸಾವಂತ್ ತನಗೆ ಬೆದರಿಕೆ ಹಾಕಿದ್ದಾರೆ. ಇದು ಮಹಿಳೆಯರಿಗೆ ಆತಂಕ ಉಂಟು ಮಾಡುವ ವಿಚಾರ. ಈ ಹಿನ್ನೆಲೆ ಅರವಿಂದ ಸಾವಂತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಶಿವಸೇನೆ ಸರ್ಕಾರದ ತಪ್ಪಿನ ವಿರುದ್ದ ನಾನು ಮಾತನಾಡಿದ್ದಕ್ಕೆ ಅರವಿಂದ ಸಾವಂತ್ ಆಕ್ರೋಶಿತರಾಗಿದ್ದು, ನೀವು ಮಹಾರಾಷ್ಟ್ರದಲ್ಲಿ ಹೇಗೆ ತಿರುಗಾಡುತ್ತೀರಿ ನಾನೂ ನೋಡುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆ ರೀತಿ ಬೆದರಿಕೆ ಹಾಕಿದ ವೇಳೆ ನನಗೆ ಏನು ಮಾಡುವುದು ತಿಳಿಯಲಿಲ್ಲ. ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ನನ್ನ ಸಹದ್ಯೋಗಿಯ ಬಳಿ ಆತ ಹೇಳಿದ್ದು ಕೇಳಿಸಿಕೊಂಡಿರಾ ಎಂದು ಕೇಳಿದೆ. ಅವರು ಹೌದು ಎಂದರು. ಈ ಘಟನೆಗೆ ರಾಜಮಂದ್ರಿ ಸಂಸದ ಭರತ್ ಮರ್ಗಾನಿ ಸಾಕ್ಷಿಯಾಗಿದ್ದಾರೆ ಎಂದೂ ನವನೀತ್ ಕೌರ್ ಹೇಳಿದ್ದಾರೆ.
ನನಗೆ ಶಿವಸೇನೆ ಹೆಸರಿನಲ್ಲಿ ಬೆದರಿಕೆ ಪತ್ರ ಹಾಗೂ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ನಾನು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮತ್ತು ಪೊಲೀಸರಲ್ಲಿ ದೂರು ಸಲ್ಲಿಸಿದ್ದೇನೆ. ಆ ಪತ್ರ ಹಾಗೂ ಕರೆಯಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಗ್ಗೆ ಮಾತಾಡಿದರೆ, ನಿಮ್ಮ ಸುಂದರ ಮುಖದ ಮೇಲೆ ಆಸಿಡ್ ಹಾಕಲಾಗುವುದು ಎಂದು ಬೆದರಿಸಿದ್ದಾರೆ ಎಂದು ನವನೀತ್ ದೂರಿದ್ದಾರೆ.