ನವದೆಹಲಿ, ಮಾ.23 (DaijiworldNews/PY): ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 24 ಲಕ್ಷ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದಾಗಿ ಇತ್ತೀಚೆಗೆ ಬಿಜೆಪಿ ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಆದರೆ, ಆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಹಿಳೆಗೆ ಉಳಿದಿಕೊಳ್ಳಲು ಸ್ವಂತ ಮನೆಯೇ ಇಲ್ಲ. ಆಕೆ ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾಳೆ ಎನ್ನುವ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಲಕ್ಷ್ಮೀ ದೇವಿ ಎನ್ನುವ ಮಹಿಳೆಯ ಫೋಟೋವನ್ನು ಹಾಕಿ ಫೆ.25ರಂದು ಪತ್ರಿಕೆಗಳಲ್ಲಿ ಆತ್ಮನಿರ್ಭರ ಭಾರತ, ಆತ್ಮ ನಿರ್ಭರ ಬಂಗಾಳ ಎನ್ನುವ ಶೀರ್ಷಿಕೆ ಅಡಿಯಡಿ ಕೇಂದ್ರ ಸರ್ಕಾರ ಜಾಹೀರಾತು ನೀಡಿತ್ತು. ನನಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸೂರು ಸಿಕ್ಕಿದೆ ಎಂದು ಲಕ್ಷ್ಮೀ ದೇವಿಯ ಹೇಳಿಯನ್ನು ಜಾಹೀರಾತಿನಲ್ಲೊ ಪ್ರಕಟಿಸಲಾಗಿತ್ತು.
ಖಾಸಗಿ ಸುದ್ದಿ ವಾಹಿನಿಯೊಂದು ಮಹಿಳೆಯನ್ನು ಸಂದರ್ಶಿಸಿದ್ದು, ಈ ವೇಳೆ ಆಕೆ, "ಈ ವಿಚಾರ ನನಗೆ ತಿಳಿದೇ ಇರಲಿಲ್ಲ. ಪತ್ರಿಕೆ ನೋಡಿ ನನಗೆ ಭಯವಾಯಿತು. ನನ್ನ ಫೋಟೋ ಯಾರು ತೆಗೆದಿದ್ದಾರೆ ಎಂದು ಕೂಡಾ ನನಗೆ ತಿಳಿದಿಲ್ಲ. ಬಹುಬಾಜರ್ ಪ್ರದೇಶದಲ್ಲಿರುವ ಬಾಡಿಗೆ ಕೋಣೆಯೊಂದರಲ್ಲಿ ನಾನು ಆರು ಮಂದಿಯ ಜೊತೆ ವಾಸವಾಗಿದ್ದೇನೆ. ಇದಕ್ಕೆ ತಿಂಗಳಿಗೆ 500 ರೂ. ಬಾಡಿಗೆ ನೀಡುತ್ತಿದ್ದೇವೆ" ಎಂದಿದ್ದಾರೆ.