ನವದೆಹಲಿ, ಮಾ.23 (DaijiworldNews/MB) : ಕೊರೊನಾ ಸೋಂಕು ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಸೋಮವಾರ ಮಾರ್ಚ್ 22 ರಂದು ಒಂದು ವರ್ಷ ತುಂಬಿದ್ದು ಕಳೆದ ವರ್ಷ ಮಾರ್ಚ್ 24 ರಿಂದ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು.
2020 ರ ಮಾರ್ಚ್ 22 ರ ಭಾನುವಾರದಂದು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯೊಳಗೆ ಇರಬೇಕೆಂದು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸಲು ಅದೇ ದಿನ ಸಂಜೆ 5 ಗಂಟೆಗೆ ತಮ್ಮ ಮನೆಯ ಬಾಲ್ಕನಿಗಳಲ್ಲಿ ನಿಂತು 5 ನಿಮಿಷ ಚಪ್ಪಾಳೆ ತಟ್ಟಬೇಕು, ತಟ್ಟೆ ಬಾರಿಸಬೇಕು ಎಂದು ಹೇಳಿದ್ದರು.
ಪ್ರಧಾನಿ ಕರೆಯಂತೆ ದೇಶದಾದ್ಯಂತ ಜನರು ಚಪ್ಪಾಳೆ, ಜಾಗಟೆ, ತಟ್ಟೆ ಬಾರಿಸಿದ್ದು ಮಾತ್ರವಲ್ಲದೆ ಪಟಾಕಿಯನ್ನು ಸಿಡಿಸಿ ಕೂಡಾ ಜನತಾ ಕರ್ಫ್ಯೂ ನಡೆಸಿದ್ದರು. ಇದಾದ ಬಳಿಕ ಭಾರತವೂ ಸೇರಿದಂತೆ ಬಹುತೇಕ ದೇಶಗಳು ಲಾಕ್ಡೌನ್ ಮೊರೆಹೋದವು. ಕಳೆದ ವರ್ಷ ಜನತಾ ಕರ್ಫ್ಯೂ ದಿನ ಜನರು ಗಂಟೆ, ಜಾಗಟೆ ಬಾರಿಸಿ, ತಟ್ಟೆಗಳನ್ನು ತಟ್ಟಿದ ಫೋಟೋಗಳು ಈಗ ಮತ್ತೆ ಟ್ರೋಲ್ ಆಗುತ್ತಿದೆ.
ಜನತಾ ಕರ್ಫ್ಯೂ ಮುಗಿಯುವಷ್ಟರಲ್ಲಿ ಕೊರೊನಾ ಸೋಂಕು ದೇಶದಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. 169 ಜನರಿಗೆ ಸೋಂಕು ತಗುಲಿತ್ತು. ಇಷ್ಟಾದರೂ ಪ್ರಧಾನಿ ಚಪ್ಪಾಳೆ ತಟ್ಟಲು, ತಟ್ಟೆ ಬಾರಿಸಲು ಹೇಳುತ್ತಿದ್ದಾರೆ ಎಂದು ಟೀಕೆ ಕೂಡಾ ಮಾಡಲಾಗಿತ್ತು. ಇದಾದ ಬಳಿಕ ಮಾರ್ಚ್ 24 ರಿಂದ 21 ದಿನಗಳ ಲಾಕ್ಡೌನ್ನ್ನು ಪ್ರಧಾನಿ ಮೋದಿ ಘೋಷಿಸಿದರು. ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿತ್ತು.
ಪ್ರಸ್ತುತ ದೇಶದಲ್ಲಿ 1,16,46,081 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ 1,59,967 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತವು ಕೊರೊನಾ ಪ್ರಕರಣದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.
ಈಗ ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಆದರೂ ಕೊರೊನಾ ಭಯ ಇನ್ನೂ ಹೋಗಿಲ್ಲ. ದೇಶದಲ್ಲಿ ಈಗ ಕೊರೊನಾದ ಎರಡನೇ ಅಲೆಯ ಆತಂಕ ಆರಂಭವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವಂತಹ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಪ್ರಧಾನಿ ಮೋದಿ ಈಗಾಗಲೇ ಮನವಿ ಮಾಡಿದ್ದಾರೆ.