ಬೆಂಗಳೂರು, ಮಾ 23(DaijiworldNews/MS): ಪ್ರಜಾಪ್ರಭುತ್ವಕ್ಕೆ ಅತೀದೊಡ್ಡ ಶತ್ರುವಾದ ಕುಟುಂಬ ರಾಜಕಾರಣ ರಾಷ್ಟ್ರಕ್ಕೆ ಹೊರೆ. ಅದು ಸರ್ವಾಧಿಕಾರಿ ಆಡಳಿತದ ಮತ್ತೂಂದು ಸ್ವರೂಪ ಎಂದು ಹೇಳಿಕೊಂಡು ಓಡಾಡುತ್ತಿರುವ ಬಿಜೆಪಿ ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ ಎನ್ನುವ ಮೂಲಕ ಆತ್ಮವಂಚನೆಯ ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತಿತ್ತು. ಆದರೆ, ಇಂತಹ ಹೇಳಿಕೆಗಳನ್ನು ತಳ್ಳಿಹಾಕಿರುವ ಬಿಎಸ್ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದ್ದರು. ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವಾದರೂ ಮುಂಬರುವ 2023 ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಯಡಿಯೂರಪ್ಪ ಹೇ ಳಿದ್ದಾರೆ.
ಇದೇ ವಿಚಾರವನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ , "ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ ಎನ್ನುವ ಆತ್ಮವಂಚನೆಯ ಮಾತಾಡುವ ಬಿಜೆಪಿಯೂ "ನಾನೊಬ್ಬನೇ, ನನಗಿಬ್ಬರು" ಎನ್ನುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಬಿಜೆಪಿ ಮೊದಲು ತಮ್ಮವರ ಡಿಎನ್ ಎ ಪರೀಕ್ಷೆ ಮಾಡಿಸಲಿ! ಡಿಎನ್ ಎ ಹೊಂದದಿದ್ದರೆ ತಮ್ಮದು ಕುಟುಂಬ ರಾಜಕಾರಣದ ಪಕ್ಷವಲ್ಲ ಎಂದು ಘೋಷಿಸಿಕೊಳ್ಳಲಿ!! ಎಂದು ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿಎಸ್ ವೈ ಅವರನ್ನು ಕಟುವಾಗಿ ಕುಟುಕಿದೆ.