ಮುಂಬೈ, ಮಾ 23(DaijiworldNews/MS): ಬಾರ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಸಂಸ್ಥೆಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಪರಮ್ ಬೀರ್ ಸಿಂಗ್ ಅವರ ಆರೋಪದ ಮೇರೆಗೆ ಅನಿಲ್ ದೇಶಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಆಗ್ರಹ ಮಾಡುತ್ತಿದೆ. ದೇಶ್ ಮುಖ್ ವಿರುದ್ಧ ಸಿಂಗ್ ಮಾಡಿದ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ. "ಭ್ರಷ್ಟ" ಹಾಗೂ "ಕ್ರಿಮಿನಲ್ ಮನಸ್ಥಿತಿ" ಹೊಂದಿರುವ ಸರ್ಕಾರಕ್ಕೆ ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಬಿಜೆಪಿ ಹೇಳಿದೆ. ಅನಿಲ್ ದೇಶ್ ಮುಖ್ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ
ಸಂಚಲನ ಸೃಷ್ಟಿ ಮಾಡಿದ್ದ ಈ ಆರೋಪ ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಯಾದರೂ, ವಿಪಕ್ಷಗಳಿಂದ ಒತ್ತಡ ಬಂದರೂ, ಅನಿಲ್ ದೇಶ್ ಮುಖ್ ಅವರಿಂದ ರಾಜೀನಾಮೆಯನ್ನು, ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರ ಪಡೆದುಕೊಂಡಿಲ್ಲ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಥವಾ ಎನ್ ಸಿಪಿ 100 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ ಹೊತ್ತ ಅನಿಲ್ ದೇಶಮುಖ್ ಅವರಿಂದ ರಾಜೀನಾಮೆ ಪಡೆಯದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಈಗ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಬುಧವಾರ ಪರಮ್ ಬೀರ್ ಸಿಂಗ್ ಅವರ ಅರ್ಜಿ ವಿಚಾರಣೆ ನಡೆಸಲಿದೆ.