ಬೆಂಗಳೂರು, ಮಾ.23 (DaijiworldNews/MB) : ಕನ್ನಡದ ಸೂಪರ್ ಸ್ಟಾರ್ ಡಾ.ರಾಜ್ಕುಮಾರ್ ಅವರ ಹಿರಿಯ ಪುತ್ರ ಶಿವ ರಾಜ್ಕುಮಾರ್ ಅವರಿಗೆ ಕರ್ನಾಟಕ ಸರ್ಕಾರದ ಗೃಹ ಇಲಾಖೆ ಭದ್ರತೆ ಒದಗಿಸಿದೆ.
ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಮಾತನಾಡಿದ್ದ ಮಾಜಿ ಸಚಿವೆ, ಮಾಜಿ ನಟಿ, ಬರಹಗಾರ್ತಿ ಬಿ.ಟಿ.ಲಲಿತಾ ನಾಯಕ್ ಅವರು, "ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ನಾನು ಸೇರಿದಂತೆ ಇನ್ನು ಕೆಲವು ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ" ಎಂದಿದ್ದರು. ಈ ಬೆನ್ನಲ್ಲೆ ಸರ್ಕಾರ ಶಿವರಾಜ್ಕುಮಾರ್, ಲಲಿತಾ ನಾಯಕ್ ಅವರಿಗೆ ಭದ್ರತೆ ಒದಗಿಸಿದೆ.
''ಮಾರ್ಚ್ 20 ರಂದು ಕರೀಮ್ ಚಲ್ಲಕೆರೆ ಎಂಬ ವ್ಯಕ್ತಿಯಿಂದ ತನಗೆ ಪತ್ರವೊಂದು ಬಂದಿದೆ. ಈ ಪತ್ರದಲ್ಲಿ ರಾಜ್ಕುಮಾರ್, ರವಿ ಮತ್ತು ಟಿವಿ ನ್ಯೂಸ್ ಚಾನೆಲ್ ಮಾಲೀಕರನ್ನು ಹತ್ಯೆ ಮಾಡಲಾಗುವುದು ಎಂದು ಬೆದರಿಸಲಾಗಿದೆ" ಎಂದು ತಿಳಿಸಿದ್ದರು.
"ಈ ಪತ್ರವನ್ನು ಅಧಿಕಾರಿಗಳ ಗಮನಕ್ಕೆ ತಂದ ನಂತರ, ನನಗೆ ಭದ್ರತಾ ರಕ್ಷಣೆ ಸಿಕ್ಕಿದೆ. ಈ ಬೆದರಿಕೆಯ ಹಿಂದಿನ ನಿಖರವಾದ ಕಾರಣವನ್ನು ಪತ್ರದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ'' ಎಂದೂ ಅವರು ತಿಳಿಸಿದ್ದರು.
ಆದರೆ ಈ ಪತ್ರದ ಸುದ್ದಿ ಶಿವ ರಾಜ್ಕುಮಾರ್ ಅಭಿಮಾನಿಗಳಲ್ಲಿ ಹಾಗೂ ಸ್ಯಾಂಡಲ್ವುಡ್ನಲ್ಲಿ ಆತಂಕ ಹುಟ್ಟಿಸಿತು. ಏತನ್ಮಧ್ಯೆ, ಆರೋಪಿಗಳನ್ನು ಬಂಧಿಸಲು ಈ ಪ್ರಕರಣದ ತನಿಖೆ ಮಾಡುವುದಾಗಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಭರವಸೆ ನೀಡಿದ್ದರು.